ಭೋಪಾಲ್:‌ ಪತಿ ಅವಲಕ್ಕಿ ಉಪ್ಪಿಟ್ಟು ಮಾಡಿಕೊಟ್ಟಿಲ್ಲ ಎಂದು ಮನನೊಂದು ನವವಿವಾಹಿತೆ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಕವಿತಾ, ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ಮದುವೆಯಾದ ಕೆಲ ದಿನಗಳ ಬಳಿಕ ತನ್ನ ಪತಿ ಬಾಲ್ಕಿಶನ್ ಯಾದವ್‌ ಬಳಿ ಬೆಳಗ್ಗಿನ ತಿಂಡಿಗೆ ಪೋಹಾ ಮಾಡಿಕೊಡುವಂತೆ ಹೇಳಿದ್ದಳು. ಆದರೆ ಪತಿ ಪೋಹಾ ಮಾಡಿಕೊಡಲು ನಿರಾಕರಿಸಿ ಅದರ ಬದಲು ಡ್ರೈ ಫ್ರೂಟ್ಸ್‌ ನೀಡಿದ್ದಾನೆ. ಇದು ಕವಿತಾಳನ್ನು ಸಿಟ್ಟಿಗೆಬ್ಬಿಸಿದೆ. ಇದೇ ವಿಚಾರವಾಗಿ ಪತಿ ಜೊತೆ ಜಗಳವಾಡಿ ಆಕೆ ನೇರವಾಗಿ ರೂಮ್‌ ಒಳಗೆ ಹೋಗಿದ್ದಾಳೆ.

ಕೋಣೆಗೆ ಹೋದ ಪತ್ನಿ ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇದ್ದಾಗ ಪತಿ ಆತಂಕಗೊಂಡಿದ್ದಾನೆ. ಅಲ್ಲದೇ ರೂಮ್‌ ಒಳಗೆ ಹೋಗಿ ನೋಡಿದಾಗ ಕವಿತಾ ನೇಣಿಗೆ ಬಿಗಿದುಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಕೂಡಲೇ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಬಳಿ ಪತಿ ಬಾಲ್ಕಿಶನ್ ನಡೆದ ಘಟನೆಯನ್ನು ವಿವರಿಸಿದ್ದಾನೆ. ನಂತರ ಪೊಲೀಸರು ಕವಿತಾಳ ಮೃತದೇಹವನ್ನು ಕುಣಿಕೆಯಿಂದ ಇಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಗ್ವಾಲಿಯರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.