ಮುಂಬೈ: ಮದುವೆಯಾಗಿ ಕೇವಲ 48 ದಿನಗಳಲ್ಲೇ ನವವಿವಾಹಿತೆಯೊಬ್ಬಳು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಮುಂಬೈ ಸಮೀಪದ ಅಂಬರ್ನಾಥ್‌ನಲ್ಲಿ ನಡೆದಿದೆ.
ಮಹಿಳೆಗೆ ದೈಹಿಕ ಮತ್ತು ಮಾನಸಿಕವಾಗಿ ತೀವ್ರ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆಯ ಪತಿ, ವೈದ್ಯನೂ ಆಗಿರುವ ನಿತಿನ್ ತಿಲ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ 26 ವರ್ಷದ ವಿಶಾಖಾ ತಿಲ್ಕರ್ ಎಂಬಾಕೆಯೇ ದಾಂಪತ್ಯ ಜೀವನದ ನರಕಯಾತನೆಗೆ ಬೇಸತ್ತು ತನ್ನ ಜೀವ ಕೊನೆಗಾಣಿಸಿಕೊಂಡ ದುರ್ದೈವಿ. ಕಳೆದ ಏಪ್ರಿಲ್ 30 ರಂದು ವಿಶಾಖಾ ಮತ್ತು ನಿತಿನ್ ಅವರ ವಿವಾಹ ಅತ್ಯಂತ ಸಡಗರದಿಂದ ನಡೆದಿತ್ತು. ಮದುವೆಗೆ ಮುನ್ನ ಉಭಯ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇತ್ತಾದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ಮನೆಯವರ ಅಸಲಿ ಮುಖ ಅನಾವರಣಗೊಂಡಿದೆ.
ಮದುವೆ ಸಮಾರಂಭದಲ್ಲಿ ತಮಗೆ ನೀಡಲಾದ ಉಡುಗೊರೆಗಳು ಮತ್ತು ಗೌರವ ಮರ್ಯಾದೆಗಳು ತೃಪ್ತಿಕರವಾಗಿಲ್ಲ ಎಂದು ಅತ್ತೆ-ಮಾವ ನಿರಂತರವಾಗಿ ಅಪಸ್ವರ ತೆಗೆಯುತ್ತಿದ್ದರು. ಅಷ್ಟೇ ಅಲ್ಲದೆ, ತವರು ಮನೆಯಿಂದ ಇನ್ನಷ್ಟು ಚಿನ್ನಾಭರಣ ಹಾಗೂ ಹಣ ತರುವಂತೆ ವಿಶಾಖಾ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ದಿನನಿತ್ಯದ ಈ ಚುಚ್ಚುಮಾತುಗಳಿಂದಾಗಿ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು.
ಇವೆಲ್ಲದರ ನಡುವೆ ವಿಶಾಖಾಳ ವೈಯಕ್ತಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹರಣ ಮಾಡಲಾಗಿತ್ತು. ಪತಿ ನಿತಿನ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಆಕೆಯ ಪ್ರತಿಯೊಂದು ಚಲನವಲನದ ಮೇಲೂ ಕಣ್ಣಿಟ್ಟಿದ್ದನು. ವಿಶಾಖಾ ಯಾರೊಂದಿಗೆ ಮಾತನಾಡುತ್ತಾಳೆ, ಏನು ಮಾಡುತ್ತಾಳೆ ಎಂಬುದನ್ನು ಸದಾ ಗಮನಿಸುತ್ತಾ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು.
ಆಕೆ ನೆರೆಹೊರೆಯವರೊಂದಿಗೆ ಮಾತನಾಡಿದರೂ ಮನೆಯಲ್ಲಿ ಜಗಳ ತೆಗೆದು ಹಲ್ಲೆ ನಡೆಸಲಾಗುತ್ತಿತ್ತು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮುನ್ನವೂ ನೆರೆಮನೆಯ ಮಹಿಳೆಯೊಬ್ಬರ ಜೊತೆ ಕೇವಲ ಮಾತನಾಡಿದ್ದಕ್ಕೆ ವಿಶಾಖಾಳ ಮೇಲೆ ತೀವ್ರ ಹಲ್ಲೆ ನಡೆಸಲಾಗಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ತಾನು ಅನುಭವಿಸುತ್ತಿರುವ ಈ ಎಲ್ಲಾ ದೌರ್ಜನ್ಯ ಮತ್ತು ನರಕಯಾತನೆಯನ್ನು ವಿಶಾಖಾ ಫೋನ್ ಮೂಲಕ ತನ್ನ ತಾಯಿಗೆ ತಿಳಿಸಿ ಕಣ್ಣೀರು ಹಾಕಿದ್ದಳು. ಮಗಳ ಕಷ್ಟವನ್ನು ಕೇಳಿ ಆತಂಕಗೊಂಡ ಪೋಷಕರು, ಆಕೆಯನ್ನು ತಕ್ಷಣವೇ ತವರು ಮನೆಗೆ ಕರೆತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಹೆತ್ತವರು ಬಂದು ತನ್ನನ್ನು ಕರೆದೊಯ್ಯುವಷ್ಟರಲ್ಲೇ ಮನನೊಂದ ವಿಶಾಖಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಅಂಬರ್ನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ಮತ್ತು ಮೈದುನ ನಿನಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪತಿಯನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

