ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್‌ ಮೈಂಡ್‌ಗಳಲ್ಲಿ ಒಬ್ಬ ಹಾಗೂ ʻಪರಿಹಾರಕʼರಾಗಿ ಕಾರ್ಯನಿರ್ವಹಿಸಿದ್ದ‌ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಕೇಂದ್ರೀಯ ತನಿಖಾ ದಳ ಇಂದು ಬಂಧಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಇಬ್ಬರು ʻಸಾಲ್ವರ್ʼ ಗಳನ್ನು ರಾಜಸ್ಥಾನ ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ.

ನೀಟ್‌-ಯುಜಿ ಪರೀಕ್ಷೆ ದಿನದಿಂದ ಇವರಿಬ್ಬರು ಹಜಾರಿಬಾಗ್‌ನಲ್ಲಿ ಹಾಜರಿದ್ದರು ಎಂಬುದನ್ನು ಸಿಸಿಟಿವಿ ದೃಢಪಡಿಸಿದೆ. ಆರೋಪಿತ ಮಾಸ್ಟರ್ ಮೈಂಡ್ ಪಂಕಜ್‌ ಕುಮಾರ್‌ ʻಬಿ.ಟೆಕ್ʼ ಪದವೀಧರ ಎಂದು ಹೇಳಲಾಗಿದೆ.

ಪಂಕಜ್‌ ಕುಮಾರ್‌ ಕದ್ದಿದ್ದ ಪ್ರಶ್ನೆ ಪತ್ರಿಕೆಯನ್ನು ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಪರಿಹರಿಸಿದ್ದರು ಎಂದು ಸಿಬಿಐ ಹೇಳಿದೆ. ಸದ್ಯ ಮಾಸ್ಟರ್‌ ಮೈಂಡ್‌ ಹಾಗೂ ಇಬ್ಬರು ಸಾಲ್ವರ್‌ಗಳನ್ನ ಸಿಬಿಐ ಬಂಧಿಸಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.