ನವದೆಹಲಿ: ನೀಟ್-ಯುಜಿ 2024 ಅಕ್ರಮಕ್ಕೆ ಸಂಬಂಧಿಸಿದಂತೆ ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ನ ನಾಲ್ಕು ವಿದ್ಯಾರ್ಥಿಗಳನ್ನು ಕೇಂದ್ರೀಯ ತನಿಖಾ ದಳ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಮತ್ತು ರಾಜು ಸಿಂಗ್ ಅವರನ್ನು ಪಾಟ್ನಾ ಮತ್ತು ಹಜಾರಿಬಾಗ್ ನಿಂದ ಅರೆಸ್ಟ್ ಮಾಡಲಾಗಿತ್ತು.
ಇದರ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್‌ನೊಂದಿಗೆ ಏಮ್ಸ್-ಪಾಟ್ನಾ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಅವರ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಸಹ ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ. 2021 ರ ಬ್ಯಾಚ್‌ಗೆ ಸೇರಿದ ವಿದ್ಯಾರ್ಥಿಗಳನ್ನು ನಿನ್ನೆ ತಡರಾತ್ರಿ ಅವರ ಹಾಸ್ಟೆಲ್‌ನಿಂದ ಕರೆತಂದ ನಂತರ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ತನಿಖೆಯಲ್ಲಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಸೀಲ್ ಮಾಡಲಾಗಿದೆ.

