ಮುಂಬೈ: ಕೆಲವು ಪದ್ಯಗಳು ಪೂಜೆ ಮತ್ತು ಪ್ರಾರ್ಥನೆಗೆ ಸಂಬಂಧಿಸಿರುವುದರಿಂದ ಮುಸ್ಲಿಮರು ವಂದೇ ಮಾತರಂ ಹಾಡನ್ನು ಪಠಿಸಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಮತ್ತು ಶಾಸಕ ಅಬು ಅಸಿಮ್ ಅಜ್ಮಿ ಹೇಳಿದ್ದಾರೆ.
ರಾಷ್ಟ್ರೀಯ ಗೀತೆ ವಂದೇ ಮಾತರಂನ ಸಾಮೂಹಿಕ ಪಠಣದಲ್ಲಿ ಭಾಗವಹಿಸಲು ಬಿಜೆಪಿ ಮುಂಬೈ ನಗರ ಅಧ್ಯಕ್ಷ, ಶಾಸಕ ಅಮಿತ್ ಸತಮ್ ನೀಡಿದ ಆಹ್ವಾನವನ್ನು ಅಬು ಅಸಿಮ್ ಅಜ್ಮಿ ನಿರಾಕರಿಸಿದ್ದಾರೆ.
“ನೀವು ನನ್ನೊಂದಿಗೆ ನಮಾಜ್ ಮಾಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾನು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಯನ್ನು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವುದು ಅವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ” ಎಂದು ಅಜ್ಮಿ ಪ್ರತಿಕ್ರಿಯಿಸಿದ್ದಾರೆ.

