ಶಿರಸಿ: ಮುಸ್ಲಿಂ ಯುವಕನೊಬ್ಬ ಗೋವನ್ನು ರಕ್ಷಿಸುವ ಪ್ರಯತ್ನದಲ್ಲಿ ತನ್ನದೇ ಜೀವ ಕಳೆದುಕೊಂಡ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಗ್ರಾಮದ ಅರುಂಧತಿ ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಮಹಮ್ಮದ್ ಶಾಹಿದ್ ಅಬ್ದುಲ್ ವಾಹಬ್ (17) ಎಂದು ಗುರುತಿಸಲಾಗಿದೆ. ಗ್ರಾಮದ ಕೆರೆಯ ಸಮೀಪ ಹಸುವೊಂದು ಅಪಾಯದ ಸ್ಥಿತಿಯಲ್ಲಿ ಸಿಲುಕಿರುವುದನ್ನು ಗಮನಿಸಿದ ಮಹಮ್ಮದ್ ಶಾಹಿದ್, ಅದನ್ನು ರಕ್ಷಿಸುವ ಉದ್ದೇಶದಿಂದ ಕೆರೆಯೊಳಗೆ ಇಳಿದಿದ್ದಾನೆ ಎಂದು ತಿಳಿದುಬಂದಿದೆ. ಆಕಳನ್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನದ ವೇಳೆ ಆತನ ಕಾಲು ಜಾರಿ ಕೆರೆಯ ಆಳವಾದ ಭಾಗಕ್ಕೆ ಸಿಲುಕಿ ಮುಳುಗಿದ್ದಾನೆ ಎನ್ನಲಾಗಿದೆ.

ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ, ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ರಾಣೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಧರ್ಮಪ್ಪ, ಸುನಿಲ್, ಕಾರ್ತಿಕ್ ಹಾಗೂ ಮಂಜುನಾಥ ಅವರು ಕಾರ್ಯಾಚರಣೆ ನಡೆಸಿ ಹಲವು ಗಂಟೆಗಳ ಶೋಧದ ಬಳಿಕ ಯುವಕನ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.