ನವದೆಹಲಿ: ಸುಪ್ರೀಂ ಕೋರ್ಟ್‌ನ 75 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಹೊಸ ಧ್ವಜ ಮತ್ತು ಲಾಂಛನವನ್ನು ಅನಾವರಣಗೊಳಿಸಿದರು.
ಭಾರತ ಮಂಟಪದಲ್ಲಿ ನಡೆದ ಎರಡು ದಿನಗಳ ಜಿಲ್ಲಾ ನ್ಯಾಯಾಂಗ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುರ್ಮು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ನಮ್ಮೆಲ್ಲರಿಗೂ ದೊಡ್ಡ ಸವಾಲಾಗಿದ್ದು, ಅದನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ನ್ಯಾಯವನ್ನು ರಕ್ಷಿಸುವುದು ದೇಶದ ಎಲ್ಲಾ ನ್ಯಾಯಾಧೀಶರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್‌ನಿಂದಾಗಿ ಭಾರತೀಯ ನ್ಯಾಯಶಾಸ್ತ್ರವು ಅತ್ಯಂತ ಗೌರವಾನ್ವಿತ ಸ್ಥಾನವನ್ನು ಹೊಂದಿದೆ. ಸುಪ್ರಿಂ ಕೋರ್ಟ್ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ಮತ್ತು ಬಾಂಧವ್ಯವನ್ನು ಹೆಚ್ಚಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯು ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ಹೊಸ ಚಿಹ್ನೆಗಳನ್ನು ವಿನ್ಯಾಸಗೊಳಿಸಿದೆ. ಇನ್ನು ಧ್ವಜವು ಅಶೋಕ ಚಕ್ರ, ಐಕಾನಿಕ್ ಸುಪ್ರೀಂ ಕೋರ್ಟ್ ಕಟ್ಟಡ ಮತ್ತು ಭಾರತದ ಸಂವಿಧಾನವನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾಗವಹಿಸಿದ್ದರು.

