ಕೊಚ್ಚಿ: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಕುವೈತ್‌ನ ಮಂಗಾಫ್ ನಗರದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಒಟ್ಟು 45 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಕೊಚ್ಚಿಯಲ್ಲಿ ಬಂದಿಳಿದ ಭಾರತೀಯರ ಮೃತದೇಹಗಳನ್ನು ಮರಳಿ ತರಲು ಭಾರತೀಯ ವಾಯುಪಡೆಯ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನವನ್ನು ರವಾನಿಸಲಾಗಿತ್ತು. ಇದೀಗ ಈ ವಿಮಾನ ಕೇರಳಕ್ಕೆ ಬಂದಿಳಿದಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಲ್ಲಿ ಮೃತಪಟ್ಟಿರುವವರ ಪೈಕಿ ಅತೀ ಹೆಚ್ಚು 23 ಜನ ಕೇರಳದವರಾಗಿದ್ದು, ಹೀಗಾಗಿ ಮೊದಲು ಕೇರಳದಲ್ಲಿ ಮೃತದೇಹಗಳನ್ನು ಇಳಿಸಿದ ನಂತರ, ಆ ವಿಮಾನವು ಸಂಜೆ 4ರ ಸುಮಾರಿಗೆ ದೆಹಲಿ ತಲುಪಲಿದೆ.

ಕುವೈತ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಗರಿಷ್ಠ ಸಂಖ್ಯೆಯ ಜನರು (23) ಕೇರಳದ ಪ್ರಜೆಗಳು. ಇದಾದ ಬಳಿಕ ತಮಿಳುನಾಡು (7) ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ತಲಾ 3 ನಾಗರಿಕರು ಸಹ ಸಾವನ್ನಪ್ಪಿದ್ದಾರೆ. ಇನ್ನು ಒಡಿಶಾ ರಾಜ್ಯದ ಇಬ್ಬರು ಸಾವನ್ನಪ್ಪಿದ್ದು, ಇದಲ್ಲದೆ, ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಜಾರ್ಖಂಡ್, ಬಂಗಾಳ, ಪಂಜಾಬ್ ಮತ್ತು ಹರಿಯಾಣದ ತಲಾ ಒಬ್ಬ ನಾಗರಿಕರು ಸಾವನ್ನಪ್ಪಿದ್ದಾರೆ.