ನವದೆಹಲಿ: ಲೋಕಸಭೆ ಮುಂಗಾರು ಅಧಿವೇಶನ ಜುಲೈ 22ರಿಂದ (ಸೋಮವಾರ) ಆರಂಭವಾಗಲಿದ್ದು, ಆಗಸ್ಟ್ 12ರ ವರೆಗೂ ಅಧಿವೇಶನ ನಡೆಯಲಿದೆ.
ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಲಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನು ತಿದ್ದುಪಡಿ ಮಾಡುವುದು ಸೇರಿದಂತೆ 6 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ.
ಲೋಕಸಭೆಯ ಸೆಕ್ರೆಟರಿಯೇಟ್ ಮಾಹಿತಿ ಪ್ರಕಾರ ಹಣಕಾಸು ಮಸೂದೆ, ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್‌ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕ ಮಸೂದೆ, ಕಾಫಿ ಮಸೂದೆ, ರಬ್ಬರ್ ಮಸೂದೆ ಮಂಡನೆಯಾಗಲಿದೆ.
ನೀಟ್ ಪರೀಕ್ಷೆ ಅಕ್ರಮ, ಕನ್ವರ್ ಯಾತ್ರೆ, ಮಣಿಪುರ ಸಂಘರ್ಷ, ರೈಲ್ವೆ ಸುರಕ್ಷತೆ ಸೇರಿ ಹಲವು ವಿಚಾರಗಳೊಂದಿಗೆ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಸನ್ನದ್ಧವಾಗಿದೆ. ಇದಕ್ಕಾಗಿ ತಯಾರಿ ನಡೆಸಿದ್ದು ಅಧಿವೇಶನಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ ಎನ್ನಲಾಗಿದೆ.

