ತಿರುವನಂತಪುರಂ: ಹೇಮಾ ಸಮಿತಿ ವರದಿ ಇದೀಗ ಮಾಲಿವುಡ್ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೊಂದೇ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ. ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದೀಕ್ ಅವರು ರಾಜೀನಾಮೆ ಸಲ್ಲಿಸಿದ್ದರು. ನಟ ಸಿದ್ದೀಕ್ ಅವರ ರಾಜೀನಾಮೆ ಬಳಿಕ ಅವರ ಸ್ಥಾನಕ್ಕೆ ಜಗದೀಶ್ ಅವರನ್ನು ಪ್ರಧಾನ ಪರಿಗಣಿಸಲಾಗಿತ್ತು.
17 ಸದಸ್ಯರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದ ಮೋಹನ್ ಲಾಲ್ ಅವರು ರಾಜೀನಾಮೆಯನ್ನು ಸಲ್ಲಿಸಿ ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
“ಸಮಿತಿಯ ಕೆಲ ಸದಸ್ಯರ ವಿರುದ್ಧ ಕೆಲವು ನಟಿಯರು ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ನೈತಿಕ ಆಧಾರದ ಮೇಲೆ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು ʼಅಮ್ಮʼ ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆ ನಡೆದು ಹೊಸ ಸಮಿತಿ ರಚನೆಯಾಗಲಿದೆ” ಎಂದು ಪ್ರಕಟಣೆಯಲ್ಲಿ ʼಅಮ್ಮʼ ತಿಳಿಸಿದೆ.

