ಮಧ್ಯಪ್ರದೇಶ: ನರೇಂದ್ರ ಮೋದಿ ಪ್ರಮಾಣವಚನ ವೇಳೆ ಬಿಜೆಪಿ ಕಚೇರಿ ಹೊತ್ತಿ ಉರಿದಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಪ್ಲೈವುಡ್, ಹಳೆಯ ಸೋಫಾ, ತ್ಯಾಜ್ಯ ವಸ್ತುಗಳು ಮತ್ತು ಇತರ ಪೀಠೋಪಕರಣಗಳ ತುಣುಕುಗಳಿಗೆ ಕೆಲವು ಬೆಂಕಿ ಕಿಡಿಗಳು ತಾಗಿ ಹೊತ್ತಿ ಉರಿದಿವೆ.

ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರದ ವೇಳೆ ಪಟಾಕಿ ಸಿಡಿಸಿದ್ದು, ರಾಕೆಟ್ ಅಥವಾ ಪಟಾಕಿಗಳಿಂದ ಕಚೇರಿಯ ಮೇಲಿನ ಮಹಡಿ, 4 ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಇಂದೋರ್ ಎಸಿಪಿ ತುಷಾರ್ ಸಿಂಗ್ ಹೇಳಿದ್ದಾರೆ.

ಸೋಫಾ ಹಾಗೂ ಕೆಲವು ತ್ಯಾಜ್ಯ ವಸ್ತುಗಳು ಅಲ್ಲಿ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿತ್ತು, ಸಮಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಹೆಚ್ಚಿನ ಹಾನಿಯಾಗಿಲ್ಲ ಎಂದು ಅವರು ಹೇಳಿದರು.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.