ನವದೆಹಲಿ: ಅಮರನಾಥ ಯಾತ್ರೆ ಆರಂಭವಾಗಿದ್ದು, ಪ್ರಧಾನಿ ಮೋದಿ ದೇಶದಾದ್ಯಂತ ಶಿವಭಕ್ತರಿಗೆ ವಿಶೇಷ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಭಗವಾನ್ ಅಮರನಾಥರ ಕೃಪೆಯಿಂದ ಪ್ರತಿಯೊಬ್ಬ ಯಾತ್ರಿಕರ ಪಯಣ ಸುರಕ್ಷಿತ, ಸುಖಕರ ಹಾಗೂ ಮಂಗಳಕರವಾಗಿರಲಿ ಎಂದು ಹಾರೈಸಿದ್ದಾರೆ.
ಯಾತ್ರಿಕರು ಐದು ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಮೊದಲನೆಯದಾಗಿ, ಯಾತ್ರಾ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿ ಪರಿಸರವನ್ನು ಶುಚಿಯಾಗಿಡಬೇಕು. ಎರಡನೆಯದಾಗಿ, ಆಡಳಿತ ಹಾಗೂ ಭದ್ರತಾ ಪಡೆಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ಯಾತ್ರೆ ಕೈಗೊಳ್ಳಬೇಕು.
ಮೂರನೆಯದಾಗಿ, ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿ ಯಾತ್ರೆಯ ವೆಚ್ಚದ ಕನಿಷ್ಠ ಶೇ.10ರಷ್ಟು ಮೊತ್ತವನ್ನು ಜಮ್ಮು-ಕಾಶ್ಮೀರದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಮೀಸಲಿಟ್ಟು ಅಲ್ಲಿನ ಜನರ ಜೀವನೋಪಾಯಕ್ಕೆ ಬೆಂಬಲ ನೀಡಬೇಕು.
ನಾಲ್ಕನೆಯದಾಗಿ, ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದಡಿ ಯಾತ್ರೆಯ ಬಳಿಕ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು. ಐದನೆಯದಾಗಿ, ‘ನೇಷನ್ ಫಸ್ಟ್’ ಸಂಕಲ್ಪದೊಂದಿಗೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂಬ ಕರೆಯನ್ನು ನೀಡಿದ್ದಾರೆ.

