ನವದೆಹಲಿ: ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಪ್ರಧಾನಿ ಮೋದಿ ಅವರು ಕ್ಯಾಬಿನೆಟ್‌ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಮರುದಿನವಾದ ಸೋಮವಾರ ಮೋದಿ ಅವರು ತನ್ನ ಸಂಪುಟದ ಸದಸ್ಯರ ಮೊದಲ ಸಭೆ ನಡೆಸಿದರು. ಈ ವೇಳೆ, ಯಾವುದೇ ಅನಗತ್ಯ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಡಿ. ಅಗತ್ಯವಿರುವಾಗ ಆಯಾ ಸಚಿವಾಲಯಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.

ಮಂತ್ರಿಗಳು ಸರಿಯಾಗಿ ಸಮಯಪಾಲನೆ ಮಾಡಬೇಕು. ಇದರಿಂದ ಸಚಿವಾಲಯದ ಸಿಬ್ಬಂದಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗುತ್ತದೆ. ಸಚಿವಾಲಯದ ನಿರ್ಧಾರಗಳನ್ನು, ಸಂಬಂಧಿಸಿದ ಕಡತಗಳನ್ನು ರಾಜ್ಯ ಮಂತ್ರಿ ಜೊತೆ ಹಂಚಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.