ದೆಹಲಿ: ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆ.9ರಂದು ಸಂಸತ್‌ ಭವನದಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಅಭಿನಂದಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.

ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ ಡಾ. ಹೆಗ್ಗಡೆ ಯವರು, ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಬೀದರ್‌ನಲ್ಲಿ ವಿನಿಯೋಗಿಸಿರುವ ಬಗೆಯನ್ನು ಪ್ರಧಾನಿಗೆ ವಿವರಿಸಿದರು. ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುವ 10 ಸಾವಿರ ಸಿ.ಎಸ್‌.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರಕಾರದ ಹಾಗೂ ಸಿ.ಎಸ್‌.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಪ್ರಧಾನಿಗೆ ವಿವರಿಸಿದ್ದಾರೆ.
ಡಾ| ಹೆಗ್ಗಡೆಯವರು ಬೀದರ್‌ನಲ್ಲಿ ಕ್ಷೀರಕ್ರಾಂತಿಗೆ ಯೋಜಿಸಿದ್ದು, ಕೆ.ಎಂ.ಎಫ್‌. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಹಾಲು ಸಂಗ್ರಹಕ್ಕೆ ಕಟ್ಟಡಗಳನ್ನು ನಿರ್ಮಿ ಸಿದ್ದಲ್ಲದೆ, ಅತ್ಯಾಧುನಿಕ ಯಂತ್ರಗಳನ್ನು ಒದಗಿಸಿದ್ದಾರೆ. ರೈತರಿಗೆ ಹೈನುಗಾರಿಕೆ ಬಗ್ಗೆ ತರಬೇತಿ ನೀಡಿದ್ದಾರೆ ಎಂದರು.