ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಭಾಗವಹಿಸಲು ಸರ್ಕಾರಿ ನೌಕರರ ಮೇಲಿನ ನಿಷೇಧವನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ಆದೇಶವು ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವೆ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.

ಇದರ ನಡುವೆ ಆರೆಸ್ಸೆಸ್‌ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. 58 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ನರೇಂದ್ರ ಮೋದಿ ಸರ್ಕಾರ ಹಿಂಪಡೆದಿದೆ. ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಚಾರ ಪ್ರಭಾರಿ ಸುನೀಲ್ ಅಂಬೇಕರ್ ಮಾತನಾಡಿ, ಸಂಘಟನೆಯು ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.

“ರಾಷ್ಟ್ರೀಯ ಭದ್ರತೆ, ಏಕತೆ-ಸಮಗ್ರತೆ ಮತ್ತು ನೈಸರ್ಗಿಕ ವಿಕೋಪದ ಸಮಯದಲ್ಲಿ ದೇಶದ ವಿವಿಧ ಪ್ರಕಾರಗಳ ನಾಯಕತ್ವದಲ್ಲಿ ಸಂಘದ ಪಾತ್ರವು ಶ್ಲಾಘನೀಯವಾಗಿದೆ” ಎಂದು ಅಂಬೇಡ್ಕರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರವು ಭಾರತದ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದರು. ಆರ್‌ಎಸ್‌ಎಸ್ ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರದ ಆದೇಶವು ಸಾರ್ವಜನಿಕವಾಗಿ ಪ್ರಕಟವಾದ ಒಂದು ದಿನದ ನಂತರ, ಹಲವಾರು ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ಟೀಕಿಸಿದ್ದಾರೆ.

1966ರ ನ.7ರಂದು ಸಂಸತ್ತಿನಲ್ಲಿ ಬೃಹತ್ ಗೋಹತ್ಯೆ-ವಿರೋಧಿ ಪ್ರತಿಭಟನೆ ನಡೆದ ಕಾರಣ ನಿಷೇಧವನ್ನು ವಿಧಿಸಲಾಗಿತ್ತು. ಆರೆಸ್ಸೆಸ್-ಜನಸಂಘವು ಲಕ್ಷಗಟ್ಟಲೆ ಬೆಂಬಲವನ್ನು ಈ ಸಮಯದಲ್ಲಿ ಪಡೆದಿತ್ತು. ಅನೇಕರು ಪೋಲೀಸ್ ಗುಂಡಿನ ದಾಳಿಯಲ್ಲಿ ಸಾವು ಕಂಡಿದ್ದರು. ಆರೆಸ್ಸೆಸ್‌ ಹಾಗೂ ಜನಸಂಘದ ಪ್ರಭಾವದಿಂದ ನಡುಗಿಹೋಗಿದ್ದ ಇಂದಿರಾಗಾಂಧಿ 1966ರ ನವೆಂಬರ್‌ 30 ರಂದು ಸರ್ಕಾರಿ ಸಿಬ್ಬಂದಿಗಳು ಆರೆಸ್ಸೆಸ್‌ ಸೇರುವುದಕ್ಕೆ ನಿಷೇಧ ವಿಧಿಸಿದ್ದರು.