ಆಂಧ್ರಪ್ರದೇಶ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋತಪಟ್ಟಣಂನಲ್ಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಸ್ನಾನಗೃಹದಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ.
ಜನ್ಮ ನೀಡಿದ ಬೆನ್ನಲ್ಲಿಯೇ ಗಂಡು ಮಗು ದಾರುಣ ಸಾವು ಕಂಡ ಘಟನೆ ನಡೆದಿದೆ. ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಪ್ರಥಮ ವರ್ಷದ ಇಂಟರ್ ಮೀಡಿಯೇಟ್ ಓದುತ್ತಿರುವ ವಿದ್ಯಾರ್ಥಿನಿ ಕಳೆದ ಎರಡು ತಿಂಗಳಿನಿಂದ ಹಾಸ್ಟೆಲ್‌ನಲ್ಲಿ ವಾಸ ಮಾಡುತ್ತಿದ್ದಳು. ಶಾಲೆಯ ಅಧಿಕಾರಿಗಳ ಪ್ರಕಾರ, ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸ್ನಾನಗೃಹಕ್ಕೆ ಹೋಗುವುದಾಗಿ ತಿಳಿಸಿದ್ದಳು.
ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಗಂಡು ಮಗು ಭೂಮಿಗೆ ಬರುವ ಮುನ್ನವೇ ಸಾವು ಕಂಡಿದೆ. ಬುಧವಾರ ಈ ಘಟನೆ ಸಂಭವಿಸಿದೆ. ಎಷ್ಟು ಹೊತ್ತಾದರೂ ಆಕೆ ಸ್ನಾನಗೃಹದಿಂದ ವಾಪಾಸ್ ಬರದ ಕಾರಣ, ಆಕೆಯ ಸಹಪಾಠಿಗಳು ಶಿಕ್ಷಕರಿಗೆ ಈ ಬಗ್ಗೆ ತಿಳಿಸಿದ್ದರು. ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಶಿಕ್ಷಕರು ವಾಶ್ ರೂಂ ಗೆ ತೆರಳಿ ನೋಡಿದಾಗ ಬಾಲಕಿ ಪಕ್ಕದಲ್ಲಿ ಗಂಡು ಮಗು ಜೀವ ಇಲ್ಲದೆ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

