ದೆಹಲಿ: ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಕುರಿತು ಮಾದರಿ ನೀತಿ ರೂಪಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದು ಸರ್ಕಾರದ ನೀತಿಗೆ ಸಂಬಂಧಿಸಿದ್ದು, ನ್ಯಾಯಾಲಯಗಳು ಪರಿಶೀಲಿಸಬೇಕಾದ ವಿಷಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಟ್ಟಿನ ರಜೆಗಾಗಿ ನೀತಿಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ಅಂತಹ ರಜೆಗಳನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರು ಉದ್ಯೋಗಗಳಿಂದ ದೂರವಿರುತ್ತಾರೆ. ನಾವು ಅದನ್ನು ಬಯಸುವುದಿಲ್ಲ. ಮಹಿಳೆಯರನ್ನು ರಕ್ಷಿಸಲು ನಾವು ಏನು ಮಾಡಲು ಪ್ರಯತ್ನಿಸುತ್ತೇವೆಯೋ ಅದು ಅವರ ಅನನುಕೂಲತೆಗೆ ಕಾರಣವಾಗುವುದನ್ನು ನಾವು ಬಯಸುವುದಿಲ್ಲ. ಇದು ವಾಸ್ತವವಾಗಿ ಸರ್ಕಾರದ ನೀತಿ ಅಂಶವಾಗಿದೆ. ನ್ಯಾಯಾಲಯಗಳು ಪರಿಶೀಲಿಸುವ ವಿಷಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಮಸ್ಯೆಯು ಬಹು ನೀತಿ ಅಂಶಗಳಿಗೆ ಸಂಬಂಧಿಸಿದೆ. ಹಾಗಾಗಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿನ ಕಾರ್ಯದರ್ಶಿಯನ್ನು ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಸಂಪರ್ಕಿಸಲು ನಾವು ಅರ್ಜಿದಾರರಿಗೆ ಅನುಮತಿ ನೀಡುತ್ತೇವೆ. ಈ ವಿಷಯವನ್ನು ನೀತಿ ಮಟ್ಟದಲ್ಲಿ ಪರಿಶೀಲಿಸಲು ಮತ್ತು ಎಲ್ಲಾ ಮಧ್ಯಸ್ಥಗಾರರನ್ನು ಸಂಪರ್ಕಿಸಿದ ನಂತರ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂಬುದನ್ನು ತೀರ್ಮಾನಿಸಲು ನಾವು ಕಾರ್ಯದರ್ಶಿಯಲ್ಲಿ ವಿನಂತಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಈ ನಿಟ್ಟಿನಲ್ಲಿ ಯಾವುದೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಈ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

