ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಂಸಿಎಲ್ಆರ್ ದರವನ್ನು ಇಂದು ಸೋಮವಾರ ಶೇ. 5ರಿಂದ 10 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ವಿವಿಧ ಅವಧಿಯ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಎಸ್ಬಿಐನ ಎಲ್ಲಾ ರೀತಿಯ ಸಾಲಗಳಿಗೆ ಬಡ್ಡಿದರವೂ ಹೆಚ್ಚಳವಾಗಲಿದೆ.
ಸಾಲಕ್ಕೆ ಕಟ್ಟಲಾಗುತ್ತಿರುವ ಇಎಂಐಗೂ ಸಹಜವಾಗಿ ಹೆಚ್ಚಾಗಲಿದೆ. ಒಂದು ತಿಂಗಳ ಅವಧಿಯಲ್ಲಿ ಎಸ್ಬಿಐ ತನ್ನ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ಎಸ್ಬಿಐ ಒಂದು ವರ್ಷದ ಸಾಲದ ಅವಧಿಗೆ ಎಂಸಿಎಲ್ಆರ್ ದರಗಳನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಿತ್ತು. ಅಂದರೆ ಹತ್ತು ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿತ್ತು.
ಏನಿದು ಎಂಸಿಎಲ್ಆರ್ ದರ?
ಎಂಸಿಎಲ್ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್. ಆರ್ಬಿಐ ಸಾಮಾನ್ಯವಾಗಿ ಇದನ್ನು ನಿಗದಿ ಮಾಡುತ್ತದೆ. ಇದು ಒಂದು ಬ್ಯಾಂಕ್ ಸಾಲ ನೀಡುವಾಗ ಇರಿಸಬೇಕಾದ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ದರಕ್ಕೆ ಬ್ಯಾಂಕ್ ಸಾಲ ಕೊಡುವಂತಿಲ್ಲ.
ಬ್ಯಾಂಕುಗಳೂ ಕೂಡ ಎಂಸಿಎಲ್ಆರ್ ದರಗಳನ್ನು ಏರಿಸಬಹುದು. ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬೇಕೆಂದರೆ ಹಣ ಬೇಕು. ಎಫ್ಡಿ ಇತ್ಯಾದಿ ಠೇವಣಿ ಮೂಲಕ ಅದು ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತದೆ. ಕೆಲವೊಮ್ಮೆ ಅದು ಆರ್ಬಿಐನಿಂದಲೂ ಅಥವಾ ಬೇರೆ ಮಾರುಕಟ್ಟೆಯಿಂದಲೋ ಫಂಡಿಂಗ್ ಪಡೆಯಬಹುದು. ಇದಕ್ಕೆ ಅದು ವ್ಯಯಿಸುವ ದರವೇ ಎಂಸಿಎಲ್ಆರ್ ಆಗುತ್ತದೆ.

