ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ಭೂಕುಸಿತ ದುರಂತದ ಬೆನ್ನಲ್ಲೇ ಕೇರಳ ಸರ್ಕಾರವು ಸ್ಫೋಟಕ ಆರೋಪವೊಂದನ್ನು ಮಾಡಿದೆ. ಇದು ಪ್ರಕೃತಿ ವಿಕೋಪದಿಂದ ನಡೆದಿರುವ ನೈಸರ್ಗಿಕ ದುರಂತವಲ್ಲ, ಬದಲಿಗೆ ಕೇವಲ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ನಡೆದಿರುವ ‘ಮಾನವ ನಿರ್ಮಿತ’ ದುರಂತ ಎಂದು ಕೇರಳದ ಸಚಿವರು ಗಂಭೀರವಾಗಿ ದೂಷಿಸಿದ್ದಾರೆ.

ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನಾ ಕಾಮಗಾರಿ ನಡೆಯುತ್ತಿರುವ ಮೀನಾಕ್ಷಿ ಸೇತುವೆಯ ಬಳಿ ಮಂಗಳವಾರ ಈ ಭೀಕರ ಭೂಕುಸಿತ ಸಂಭವಿಸಿದೆ. ಆರಂಭದಲ್ಲಿ ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರು. ಆದರೆ ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 4 ರಿಂದ 5ಕ್ಕೆ ಏರಿಕೆಯಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸೇತುವೆ ಬಳಿ ಮಣ್ಣು ಕುಸಿದು ಬೀಳುತ್ತಿರುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಕೇರಳದ ಸಚಿವರಾದ ರಮೇಶ್ ಚೆನ್ನಿತ್ತಲ ಮತ್ತು ಕೃಷಿ ಸಚಿವ ಟಿ. ಸಿದ್ದಿಕ್ ಅವರು ಕಾಮಗಾರಿ ನಡೆಸುತ್ತಿರುವ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸುರಂಗ ಯೋಜನಾ ಸ್ಥಳದಲ್ಲಿ ಅಗೆಯಲಾದ ಮಣ್ಣು ಮತ್ತು ಅವಶೇಷಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ಮೀನಾಕ್ಷಿ ಸೇತುವೆಯ ಅಡಿಯಲ್ಲೇ ತಂದು ಸುರಿಯಲಾಗಿದೆ. 2024 ರ ಭಾರಿ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ವಯನಾಡ್ ಟೌನ್‌ಶಿಪ್ ಯೋಜನೆಯಡಿ ಮನೆಗಳನ್ನು ನಿರ್ಮಿಸುವಾಗ ತೆಗೆದ ಮಣ್ಣನ್ನು ಸಹ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಇಲ್ಲೇ ಹಾಕಲಾಗಿತ್ತು.

“ಇಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಮಣ್ಣನ್ನು ತಕ್ಷಣವೇ ತೆಗೆದುಹಾಕುವಂತೆ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ಸಚಿವ ಪಿ.ಕೆ. ಬಶೀರ್ ಮತ್ತು ಜಿಲ್ಲಾಧಿಕಾರಿಗಳು ಬಹಳ ಮೊದಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳ ಸೂಚನೆಯನ್ನು ಗುತ್ತಿಗೆ ಸಂಸ್ಥೆ ಪಾಲಿಸಲೇ ಇಲ್ಲ” ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಸಚಿವ ಟಿ. ಸಿದ್ದಿಕ್ ಕಿಡಿಕಾರಿದ್ದಾರೆ.

ಅಲ್ಲದೆ, ಸುರಂಗ ಮಾರ್ಗ ನಿರ್ಮಾಣ ಆರಂಭವಾಗುವಾಗ ಅದರ ಸಮೀಪದಲ್ಲಿದ್ದ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿತ್ತು. ಯೋಜನೆ ಆರಂಭವಾದ ಮೇಲೆ ಜಾಗದಿಂದ ನೀರು ಹರಿಯುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಸಹ ಅಧಿಕಾರಿಗಳು ಗಮನ ಹರಿಸಲಿಲ್ಲ, ಇದೇ ಇಂದಿನ ಭೀಕರ ದುರಂತಕ್ಕೆ ಕಾರಣ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸರ್ಕಾರ ಈಗ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಸರ್ಕಾರದ ತೀವ್ರ ಆರೋಪಗಳ ಬೆನ್ನಲ್ಲೇ, ಸುರಂಗ ಕಾಮಗಾರಿಯ ಗುತ್ತಿಗೆ ಪಡೆದಿರುವ ‘ದಿಲೀಪ್ ಬಿಲ್ಡ್‌ಕಾನ್’ ಕಂಪನಿಯು ತನ್ನ ಸ್ಪಷ್ಟನೆ ನೀಡಿದೆ. “ಇಲ್ಲಿ ನಡೆದಿರುವ ಭೂಕುಸಿತಕ್ಕೆ ನಮ್ಮ ಕಡೆಯಿಂದ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ. ಈ ಯೋಜನೆಯನ್ನು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಅನುಷ್ಠಾನಕ್ಕೆ ತರಲಾಗುತ್ತಿದೆ. ಪರಿಸರಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕೃತ ಅನುಮೋದನೆಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸರ್ಕಾರದ ಎಲ್ಲಾ ಪ್ರೋಟೊಕಾಲ್‌ಗಳನ್ನು ಅನುಸರಿಸಿಯೇ ಕಾಮಗಾರಿ ನಡೆಸುತ್ತಿದ್ದೇವೆ” ಎಂದು ಕಂಪನಿ ಸಮರ್ಥಿಸಿಕೊಂಡಿದೆ.

ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸೇತುವೆಯ ಎರಡೂ ಬದಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳಿಗಾಗಿ ಮುಂಡಕ್ಕೈ ಅರಣ್ಯ ಠಾಣೆ ಮತ್ತು ಚೂರಲ್ಮಾಲಾ ಚರ್ಚ್ ಹಾಲ್‌ನಲ್ಲಿ ತಾತ್ಕಾಲಿಕ ಆಶ್ರಯ ತಾಣಗಳನ್ನು (ಗಂಜಿ ಕೇಂದ್ರ) ವ್ಯವಸ್ಥೆ ಮಾಡಲಾಗಿದೆ.

ಭಾರೀ ಮಳೆಯ ಮುನ್ನೆಚ್ಚರಿಕೆಯಾಗಿ ಸುರಂಗ ಸ್ಥಳದಲ್ಲಿ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶಾಲಾ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಎರಟ್ಟುಕುಂಡು, ಅಟ್ಟಮಲ, ಮಮ್ಮಿಕುನ್ನು ಮತ್ತು ಅಂಬೇಡ್ಕರ್ ಕಾಲೋನಿ ಸೇರಿದಂತೆ ದುರ್ಬಲ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದರೊಂದಿಗೆ, ಅವಶೇಷಗಳನ್ನು ತೆರವುಗೊಳಿಸಿದ ತಕ್ಷಣ ಮೀನಾಕ್ಷಿ ಸೇತುವೆಯ ಬಲವನ್ನು (ರಚನಾತ್ಮಕ ಸುರಕ್ಷತೆ) ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.