ಮುಂಬೈ : ಭೀಕರ ಅಗ್ನಿ ದುರಂತದಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಠಾಣೆ ರೈಲ್ವೆ ನಿಲ್ದಾಣದ ಸಮೀಪವಿರುವ ಗಾಮ್‌ದೇವಿ ಮಾರುಕಟ್ಟೆ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ಮುಂಜಾನೆ 3:45ರ ಸುಮಾರಿಗೆ ಸಂಭವಿಸಿದ ಈ ಘಟನೆಯ ತೀವ್ರತೆ ಹೆಚ್ಚಿದ್ದರಿಂದ, ಅಗ್ನಿಶಾಮಕ ದಳದ ಗರಿಷ್ಠ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಿಕ್ಕಟ್ಟಿನ ಪರಿಸ್ಥಿತಿಯಾದ ‘ಬ್ರಿಗೇಡ್ ಕಾಲ್’ ಅನ್ನು ಘೋಷಿಸಲಾಗಿತ್ತು.
ರೈಲ್ವೆ ನಿಲ್ದಾಣದ ಬಳಿಯ ‘ಗಾಮ್‌ದೇವಿ’ ಮಾರುಕಟ್ಟೆ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕಾಂಪ್ಲೆಕ್ಸ್‌ನಲ್ಲಿ ನೂರಾರು ತರಕಾರಿ ಮತ್ತು ಬಟ್ಟೆ ಅಂಗಡಿಗಳಿದ್ದಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ.
ಮುಂಜಾನೆ 3:45ಕ್ಕೆ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರುತ್ತಿದ್ದ ಕಾರಣ ಇಡೀ ನಗರದ ಅಗ್ನಿಶಾಮಕ ಇಲಾಖೆಯ ಎಲ್ಲಾ ವಾಹನ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲು ‘ಬ್ರಿಗೇಡ್ ಕಾಲ್’ ನಿಯಮ ಜಾರಿಗೊಳಿಸಲಾಯಿತು.
ಬೆಂಕಿಯ ಜ್ವಾಲೆಯ ನಡುವೆ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿದ್ದ ಓರ್ವ ಅಗ್ನಿಶಾಮಕ ಸಿಬ್ಬಂದಿ ಮತ್ತು ಮಾರುಕಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿ ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಭೀಕರ ಅಗ್ನಿ ಅಪಘಾತದಲ್ಲಿ ನೂರಾರು ಬಟ್ಟೆ ಅಂಗಡಿಗಳು, ತರಕಾರಿ ಮತ್ತು ಹಣ್ಣಿನ ಅಂಗಡಿಗಳು ಹಾಗೂ ಸ್ಥಳೀಯ ಮುನ್ಸಿಪಲ್ ವಾರ್ಡ್ ಕಚೇರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಗಂಟೆಗಳ ಕಾಲ ನಡೆದ ಸುದೀರ್ಘ ಹಾಗೂ ಸವಾಲಿನ ರಕ್ಷಣಾ ಕಾರ್ಯಾಚರಣೆಯ ನಂತರ ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.
ಬೆಂಕಿಯಿಂದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದು, ಸದ್ಯಕ್ಕೆ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನೆಂಬುದು ಇನ್ನು ಪತ್ತೆಯಾಗಿಲ್ಲ.

