ಕೋಲ್ಕತ್ತಾ: ಮುರ್ಷಿದಾಬಾದ್‌ನ ರಾಮೇಶ್ವರಪುರ ಗ್ರಾಮದಲ್ಲಿ ಸ್ಫೋಟ ಸಂಭವಿಸಿದ್ದು, ಪರಿಣಾಮ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದರೆ,  ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ ಸುಮಾರು 12:30ಕ್ಕೆ ಅನಿಸೂರ್ ಶೇಖ್ ಎಂಬುವವರ ಮನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡು, ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸ್ಫೋಟದ ವೇಳೆ ಮನೆಯಲ್ಲಿದ್ದ ನಾಲ್ವರು ಮಹಿಳೆಯರು, ಒಂದು ಮಗು ಮತ್ತು ಶೇಖ್ ಸೇರಿದಂತೆ ಆರು ಜನರ ಪೈಕಿ ಬಾಲಕಿ ಮೃತಪಟ್ಟಿದ್ದರೆ, ಇನ್ನುಳಿದ ಐದು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಸ್ಫೋಟದ ತೀವ್ರತೆಗೆ ಕೆಲ ನೆರೆಹೊರೆಯವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮೃತ ಬಾಲಕಿಯನ್ನು  ಅಮಿನಾ ಪರ್ವೀನ್ (3) ಎಂದು ಗುರುತಿಸಲಾಗಿದೆ. ಇನ್ನು ಗಾಯಾಳುಗಳನ್ನು ಅಹ್ಲಾದಿ ಬೀಬಿ, ರುಲಿ ಬೀಬಿ, ನೂರ್ಜಹಾನ್ ಖಾತುನ್, ಅನಿಸುರ್ ಶೇಖ್ ಅಲಿಯಾಸ್ ದಲೀಮ್ ಮತ್ತು ರಿಜ್ಬಾ ಬೀಬಿ ಎನ್ನಲಾಗಿದೆ.

ಗಾಯಾಳುಗಳನ್ನು ಮೊದಲಿಗೆ ಗೋಕರ್ಣ ಬ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಐದು ಮಂದಿಯನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂರು ವರ್ಷದ ಮಗು ಮೃತಪಟ್ಟಿತು.

ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.