ಕನಕಪುರ: ಪೊಲೀಸರ ಸೋಗಿನಲ್ಲಿ ಮಹಿಳೆಯ 43 ಗ್ರಾಂ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

ಕಸಬಾ ಹೋಬಳಿ ಶ್ರೀನಿವಾಸನಹಳ್ಳಿ ಗ್ರಾಮದ ಮುನಿಸಿದ್ದೇಗೌಡ ಪತ್ನಿ ಗೌರಮ್ಮ ಎಂಬುವರು ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಬಳೆ ಚೆನ್ನವಲಸೆ ಗ್ರಾಮದಲ್ಲಿ ನಡೆಯುತ್ತಿದ್ದ ಊರ ಹಬ್ಬಕ್ಕೆ ಹೋಗಲೆಂದು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಳ್ಳತನ ಮಾಡಲಾಗಿದೆ.

ಗೌರಮ್ಮ ಅವರು ತಮ್ಮ ಪರಿಚಯದ ಅರುಣ್ ಎಂಬುವರ ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಚಾಮುಂಡೇಶ್ವರಿ ಹೋಟೆಲ್ ಮುಂಭಾಗದಿಂದ ನಡೆದುಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಬಂದು ಪೊಲೀಸರೆಂದು ಪರಿಚಯ ಮಾಡಿಕೊಂಡಿದ್ದಾರೆ.

ಬಸ್ ನಿಲ್ದಾಣದಲ್ಲಿ ಕಳ್ಳತ ಹೆಚ್ಚಾಗಿ ನಡೆಯುತ್ತಿವೆ. ಮಾಂಗಲ್ಯ ಸರ, ಚಿನ್ನದ ಒಡವೆಗಳನ್ನು ಈ ರೀತಿ ಕಾಣಿಸುವಂತೆ ಹಾಕಿಕೊಂಡು ಹೋಗಬಾರದು. ಜಾಗೃತಿ ಮೂಡಿಸಲು ಬಂದಿದ್ದೇವೆ ಎಂದು ನಂಬಿಸಿ ಮುಂದೆ ಹೋಗದಂತೆ ತಡೆದಿದ್ದಾರೆ.

ಬಲವಂತವಾಗಿ ಮಾಂಗಲ್ಯ ಸರ ಬಿಚ್ಚಿಸಿದ್ದಾರೆ. ಪರ್ಸ್‌ನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವಂತೆ ಹೇಳಿದ್ದಾರೆ. ಗೌರಮ್ಮ ಸರವನ್ನು ಪರ್ಸ್‌ನಲ್ಲಿ ಇಡಲು ಹೋದಾಗ, ಅದನ್ನು ಹಾಗೆ ಇಡಬಾರದು. ಪೇಪರ್‌ನಲ್ಲಿ ಸುತ್ತಿ ಕೊಡುವುದಾಗಿ ಹೇಳಿ, ನಾಟಕವಾಡಿದ್ದಾರೆ. ಪರ್ಸ್‌ನಲ್ಲಿ ಪೇಪರ್ ಕವರ್ ಇಟ್ಟು ಕೊಟ್ಟು ಪರಾರಿಯಾಗಿದ್ದಾರೆ. ಗೌರಮ್ಮ ಬಸ್ ನಿಲ್ದಾಣಕ್ಕೆ ಹೋಗಿ ಪರ್ಸ್ ತೆಗೆದು ನೋಡಿದಾಗ ಖಾಲಿ ಪೇಪರ್ ಇರುವುದು ಗೊತ್ತಾಗಿದೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.