ಕೋಲ್ಕತ್ತಾ: ಅತ್ಯಾಚಾರ-ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಹಾಗೂ ದೇಶದಲ್ಲೇ ಕಠಿಣ ಎನ್ನಬಹುದಾದ ‘ಅತ್ಯಾಚಾರ ವಿರೋಧಿ ಅಪರಾಜಿತಾ ಮಸೂದೆ’ಗೆ ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನ ಮಂಗಳವಾರ ಸರ್ವಾನುಮತದ ಅಂಗೀಕಾರ ನೀಡಿದೆ.
ಕಳೆದ ತಿಂಗಳು ಕೋಲ್ಕತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆ ಸಂಭವಿಸಿದ ಕಾರಣ ಜನಾಕ್ರೋಶ ತಣಿಸಲು ಈ ಕಾಯ್ದೆ ತರಲಾಗಿದೆ. ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ (ಪ.ಬಂಗಾಳದ ಅಪರಾಧ ಕಾನೂನುಗಳ ತಿದ್ದುಪಡಿ) ಮಸೂದೆ-2024’ ಎಂದು ವಿಧೇಯಕಕ್ಕೆ ಹೆಸರಿಡಲಾಗಿದೆ. ಶಾಸನವು ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹಾಲಿ ಕಾನೂನನ್ನು ಮತ್ತಷ್ಟು ಕಠಿಣಗೊಳಿಸುವ ಗುರಿ ಹೊಂದಿದೆ.
ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಮಸೂದೆ ಮಂಡಿಸಿದರು. ಇದಕ್ಕೆ ಪೂರಕವಾಗಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಕೆಲವು ತಿದ್ದುಪಡಿ ಮಂಡಿಸಿದರು. ಆದರೆ ಅದನ್ನು ಸದನವು ಅಂಗೀಕರಿಸಲಿಲ್ಲ. ಆದರೂ ಮಸೂದೆಗೆ ವಿಪಕ್ಷಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಕಾರಣ ಸರ್ವಾನುಮತದಿಂದ ಅಂಗೀಕಾರ ದೊರಕಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಮ್ಮ ಸರ್ಕಾರ ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ನಮಗಿಂತ ದುರ್ಬಲವಾದ ಕಾಯ್ದೆ ಇದೆ. ಇದು ನಾಚಿಕೆಗೇಡಿನ ಸಂಗತಿ. ಹೀಗಾಗಿ ಎಲ್ಲ ದೇಶದಲ್ಲೇ ಅತಿ ಕಠಿಣ ಕಾನೂನನ್ನು ನಮ್ಮ ರಾಜ್ಯ ಜಾರಿಗೆ ತಂದಿದೆ. ಮಹಿಳೆಯರ ರಕ್ಷಣೆಗೆ ಪ್ರಧಾನಿ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಅವರು ರಾಜೀನಾಮೆ ನೀಡಬೇಕು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

