ನವದೆಹಲಿ: ಭಾರತವನ್ನು ಮಾದಕ ವಸ್ತುಗಳ ದುರುಪಯೋಗದಿಂದ ಮುಕ್ತಗೊಳಿಸಿ, ಯುವಕರಿಗೆ ಬಲವಾದ ಭವಿಷ್ಯ ನಿರ್ಮಿಸಲು ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್​ ಕಾರ್ಯಕ್ರಮದಲ್ಲಿ ‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕ ವಸ್ತು ಮುಕ್ತ ಯುವಕರು’ ಅಭಿಯಾನ ದೇಶಾದ್ಯಂತ ವೇಗ ಪಡೆಯುತ್ತಿರುವುದನ್ನು ಪ್ರಧಾನಿ ಗಮನಿಸಿದರು.

“ಮಾದಕ ದ್ರವ್ಯ ಮುಕ್ತ ಯುವಕರು, ಮಾದಕ ದ್ರವ್ಯ ಮುಕ್ತ ಭಾರತ ಮಾಡುವುದು ಈ ಅಭಿಯಾನದ ಸ್ಪಷ್ಟ ಗುರಿಯಾಗಿದೆ. ಮಾದಕ ದ್ರವ್ಯ ಮುಕ್ತ ಭಾರತವನ್ನು ಮತ್ತು ನಮ್ಮ ಯುವಕರಿಗೆ ಬಲವಾದ ಭವಿಷ್ಯವನ್ನು ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಬರೋಣ” ಎಂದು ಅವರು ಹೇಳಿದರು.

ಮಾದಕ ದ್ರವ್ಯ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ 2020ರ ಆಗಸ್ಟ್ 15ರಂದು ಭಾರತ ಸರ್ಕಾರ ಆರಂಭಿಸಿದ ಪ್ರಮುಖ ಉಪಕ್ರಮ ‘ನಶಾ ಮುಕ್ತ ಭಾರತ ಅಭಿಯಾನ’. ಈ ಅಭಿಯಾನವು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವುದು, ಸಮುದಾಯ ಭಾಗವಹಿಸುವಿಕೆ, ಚಿಕಿತ್ಸೆ, ಪುನರ್ವಸತಿ, ನಂತರದ ಆರೈಕೆ ಮತ್ತು ಸಾಮಾಜಿಕ ಪುನರ್ ಏಕೀಕರಣದ ಮೂಲಕ ಮಾದಕ ವ್ಯಸನವನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ ಮತ್ತು ಮಾದಕ ವ್ಯಸನದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಬೆಳೆಸುತ್ತದೆ.

ಬೀದಿ ವ್ಯಾಪಾರಿಗಳ ಕಲ್ಯಾಣ ಯೋಜನೆಯಾದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಉಲ್ಲೇಖಿಸಿದ ಮೋದಿ, ಈ ಯೋಜನೆಯು ಲಕ್ಷಾಂತರ ಮಹಿಳಾ ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು, ಅವರ ಆದಾಯವನ್ನು ಹೆಚ್ಚಿಸಲು ಮತ್ತು ಅವರ ಕುಟುಂಬಗಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.

‘ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ’ಯ ಮೂಲಕ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರು ಹೊಸ ಶಕ್ತಿ ಪಡೆಯುತ್ತಿದ್ದಾರೆ. ಆದರೆ ‘ಮಹಿಳಾ ಸಬಲೀಕರಣ’ಕ್ಕೆ ಸಹಾಯಕವಾಗುತ್ತಿರುವ ಈ ಯೊಜನೆಯ ಬಗ್ಗೆ ಅಗತ್ಯವಿರುವಷ್ಟು ಚರ್ಚೆಯಾಗುತ್ತಿಲ್ಲ ಎಂದು ಅವರು ಹೇಳಿದರು.

“‘ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ’ಯ ಫಲಾನುಭವಿಗಳಲ್ಲಿ ಸುಮಾರು ಶೇ. 46 ರಷ್ಟು ಮಹಿಳೆಯರು. ಅಂದರೆ ದೇಶಾದ್ಯಂತ ಸುಮಾರು 35 ಲಕ್ಷ ಮಹಿಳೆಯರು ತಮ್ಮ ವ್ಯವಹಾರಗಳನ್ನು ಮುನ್ನಡೆಸಲು ಈ ಯೋಜನೆ ಜೊತೆ ಸಂಪರ್ಕ ಸಾಧಿಸುತ್ತಿದ್ದಾರೆ” ಎಂದರು.

2020ರ ಜೂನ್ ತಿಂಗಳಲ್ಲಿ ಪ್ರಾರಂಭಿಸಲಾದ PM SWANidhi ಯೋಜನೆಯನ್ನು ಬೀದಿ ವ್ಯಾಪಾರಿಗಳು ಆರ್ಥಿಕ ನಿರ್ಬಂಧಗಳ ದುಷ್ಪರಿಣಾಮಗಳನ್ನು ನಿವಾರಿಸಲು ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಕಳೆದುಹೋದ ವ್ಯವಹಾರಗಳನ್ನು ಪುನರಾರಂಭಿಸಲು ಸಹಾಯ ಮಾಡಲು ರೂಪಿಸಲಾಯಿತು.