ಉತ್ತರಾಖಂಡ್: ಚಮೋಲಿ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗಕ್ಕೆ ನೀರು ನುಗ್ಗಿ ಗುರುವಾರ 9 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಂಗದೊಳಗೆ 22 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇಪ್ಪತ್ತು ಜನರನ್ನು ಸುರಂಗದಿಂದ ಹೊರತರಲಾಗಿದೆ. ಅವರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ, ಇತರ 14 ಮಂದಿ ಗಾಯಗೊಂಡಿದ್ದಾರೆ ಮತ್ತು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದ ಕಾರ್ಮಿಕರ ಬಗ್ಗೆ ಮಾಹಿತಿ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಪಿಪಲ್ಕೋಟಿ ಪ್ರದೇಶದಲ್ಲಿರುವ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಟಿಎಚ್‌ಡಿಸಿ) ಲಿಮಿಟೆಡ್‌ನ ಯೋಜನಾ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (ಎಚ್‌ಸಿಸಿ) ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ನೀರು ಮತ್ತು ಅವಶೇಷಗಳು ನುಗ್ಗಿದ್ದರಿಂದಾಗಿ ಕಾರ್ಮಿಕರು ಅಪಾಯಕ್ಕೆ ಸಿಲುಕಿಕೊಂಡರು ಎಂದು ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಆನಂದ್ ವರ್ಧನ್ ಈ ಹಿಂದೆ ಮಾಹಿತಿ ನೀಡಿದ್ದರು.
ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್ ಅವರು ಈ ಅಪಘಾತದ ಬಗ್ಗೆ ಗುರುವಾರವೇ ದೃಢಪಡಿಸಿದ್ದರು. ಸುರಂಗದಿಂದ ಎಂಟು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ನಿನ್ನೆಯ ಹೇಳಿಕೆಯಲ್ಲಿ ತಿಳಿಸಿದ್ದರು.
ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ -ಎಸ್‌ಡಿಆರ್‌ಎಫ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ – ಸಿಐಎಸ್‌ಎಫ್ ಮತ್ತು ಇತರ ಸಂಸ್ಥೆಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುತ್ತಿವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಈ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, “ಪಿಪಲ್ಕೋಟಿಯಲ್ಲಿರುವ ಟಿಹೆಚ್‌ಡಿಸಿ ಸುರಂಗಕ್ಕೆ ಅವಶೇಷಗಳು ಮತ್ತು ನೀರು ಪ್ರವೇಶಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಎನ್‌ಡಿಆರ್‌ಎಫ್ ಮತ್ತು ಯುಕೆಎಸ್‌ಡಿಆರ್‌ಎಫ್ ತಂಡಗಳನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಗಿದೆ.
ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸುವಂತೆ ಅವರು ಸೂಚಿಸಿದ್ದಾರೆ. ನಾನು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಸುರಂಗದಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

