ಗ್ರೇಟರ್ ನೋಯ್ಡಾ: ದೇವಸ್ಥಾನದಲ್ಲಿ ಜೋರಾಗಿ ಘಂಟೆ ಬಾರಿಸುತ್ತಿದ್ದ ಬಗ್ಗೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಗ್ರೇಟರ್ ನೋಯ್ಡಾ ವೆಸ್ಟ್‌ನ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಕಳಿಸಿದ್ದ ನೋಟಿಸ್‌ ವಾಪಸ್‌ ಪಡೆದುಕೊಂಡಿದೆ.

ಆದೇಶಕ್ಕೆ ನಿವಾಸಿಗಳ ವಿರೋಧವನ್ನು ಪರಿಗಣಿಸಿ ತಡರಾತ್ರಿ ಮಂಡಳಿಯು ಆದೇಶವನ್ನು ವಾಪಸ್‌ ಪಡೆದುಕೊಂಡಿದೆ. ಈ ದೇವಾಲಯದಲ್ಲಿ ಜನ ಪ್ರತಿದಿನ ಪೂಜೆಗಾಗಿ ಸೇರುತ್ತಾರೆ. ದೇವಸ್ಥಾನದಲ್ಲಿ ಜೋರಾಗಿ ಘಂಟೆಗಳನ್ನು ಬಾರಿಸುವ ಬಗ್ಗೆ ಕೆಲವರು ಯುಪಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಸ್ಥಾನದ ಘಂಟೆಯ ಸದ್ದು 70 ಡೆಸಿಬಲ್ ಮೀರಿದ್ದು ತನಿಖೆ ವೇಳೆ ಪತ್ತೆಯಾಗಿದೆ. ಸದ್ದನ್ನು 55 ಡೆಸಿಬಲ್‌ ಗಳಿಗಿಂತ ಕಡಿಮೆ ಮಾಡಬೇಕು, ಪೂಜೆ ಸಮಯದಲ್ಲಿ ನಿಧಾನವಾಗಿ ಘಂಟೆ ಬಾರಿಸುವಂತೆ ಎಂದು ಮಂಡಳಿ ತಿಳಿಸಿದೆ. ಸಾರ್ವಜನಿಕರ ಭಾವನೆಗೆ ಧಕ್ಕೆ ಆದ ಕಾರಣ ನೋಟಿಸ್ ಹಿಂಪಡೆದಿದ್ದೇವೆ ಎಂದು ಮಂಡಳಿಯ ಅಧಿಕಾರಿ ಹೇಳಿದ್ದಾರೆ.