ನವದೆಹಲಿ: ಉತ್ತರಾಖಂಡ್ ರಾಜ್ಯದಲ್ಲಿರುವ ಕೇದಾರನಾಥ ಮಂದಿರಕ್ಕೆ ಹೋಗುವ ದಾರಿಯಲ್ಲಿ ಭೂಕುಸಿತ ಸಂಭವಿಸಿ ಮೂವರು ಯಾತ್ರಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಸಂಭವಿಸಿದ ಈ ದುರಂತದಲ್ಲಿ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗೌರಿಕುಂಡ್ನಿಂದ ಕೇದಾರನಾಥಕ್ಕೆ ಕಾಲುದಾರಿಯಲ್ಲಿ ಯಾತ್ರಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚೀರ್ಬಾಸ ಎಂಬ ಪ್ರದೇಶದಲ್ಲಿ ಭೂಕುಸಿತ ಘಟಿಸಿರುವುದು ವರದಿಯಾಗಿದೆ.
ಇನ್ನು ಎಂಟು ಮಂದಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದ ಮೂವರನ್ನು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಹಾರಾಷ್ಟ್ರದವರಾದರೆ, ಒಬ್ಬರು ಸ್ಥಳೀಯರೆನ್ನಲಾಗಿದೆ. ಮಹಾರಾಷ್ಟ್ರದ ನಾಗಪುರದ ಅರುಣ್ ಪರಟೆ (31 ವರ್ಷ) ಮತ್ತು ಜಲ್ನಾ ಜಿಲ್ಲೆಯ ಸುನೀಲ್ ಮಹಾದೇವ್ ಕಾಳೆ (24 ವರ್ಷ) ಹಾಗು ಉತ್ತರಾಖಂಡ್ನ ತಿಲ್ವಾರದ ಅನುರಾಗ್ ಬಿಷ್ತ್ ಅವರು ಮೃತ ವ್ಯಕ್ತಿಗಳಾಗಿದ್ದಾರೆ.

