ಇಟಾನಗರ್: ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ನಿರಂತರ ಮಳೆಯಿಂದ ಭಾರೀ ಭೂಕುಸಿತ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿ ನಾಲ್ವರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಐವರು ಸಿಲುಕಿಕೊಂಡಿದ್ದು, ಒಬ್ಬರು ಹೊರಬಂದಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಸಿಬ್ಬಂದಿ ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆದಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದವರು ಹಾಗೂ ಗಾಯಗೊಂಡವರು ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ.ಅವರೆಲ್ಲ ಈ ಪ್ರದೇಶದಲ್ಲಿ ಸ್ಥಳೀಯ ನಿರ್ಮಾಣ ಯೋಜನೆಯ ಕೆಲಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲು ಮತ್ತು ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಅರುಣಾಚಲ ಪ್ರದೇಶ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ.
ಮತ್ತೊಂದೆಡೆ, ನಿರಂತರ ಮಳೆಯಿಂದಾಗಿ ಖೋನ್ಸಾದ ಅಂಚೆ ಕಚೇರಿ ಬಳಿಯ ಖೋನ್ಸಾ-ಲಾಜು ರಸ್ತೆಯಲ್ಲಿ ಸುಮಾರು 110 ಮೀಟರ್ ರಸ್ತೆ ಕುಸಿದಿದೆ. ಇದರಿಂದ ತಿರಪ್ ಜಿಲ್ಲೆಯ ಹಲವಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈ ಹಿಂದೆ ನೀಡಿತ್ತು. ಅಲ್ಲದೇ ಹಠಾತ್ ಪ್ರವಾಹ, ಭೂಕುಸಿತ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿತ್ತು.

