ನವದೆಹಲಿ : ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಪ್ರಸಿದ್ಧ ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಸನ್ವಾಲಿಯಾ ಸೇಠ್ ದೇವಾಲಯದ ಹುಂಡಿಯಲ್ಲಿ 1 ಕೆಜಿ ತೂಕದ ಚಿನ್ನದ ಬಿಸ್ಕೇಟ್, 23 ಕೋಟಿಗೂ ಅಧಿಕ ನಗದು, ಬೆಳ್ಳಿ ಪಿಸ್ತೂಲ್ ಮತ್ತು ಬೆಳ್ಳಿಯ ಕೈಕೋಳವು ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಯು ಹುಂಡಿ ಎಣಿಕೆ ಕಾರ್ಯ ನಡೆಸುತ್ತಿದ್ದು, ಇಂದು 1 ಕೆ.ಜಿ ತೂಕದ ಚಿನ್ನದ ಬಿಸ್ಕತ್ ಜೊತೆಗೆ ಬೆಳ್ಳಿಯ ಪಿಸ್ತೂಲ್​​ ಕೂಡ ಪತ್ತೆಯಾಗಿರುವುದು ಎಲ್ಲರ ಗಮನ ಸೆಳೆದಿದೆ.

ಎರಡು ತಿಂಗಳ ನಂತರ ತೆರೆಯಲಾದ ದೇವಾಲಯದ ಖಜಾನೆಯಲ್ಲಿ ಗೋಲ್ಡ್​​​ ಬಿಸ್ಕತ್ತುಗಳು, ಬೆಳ್ಳಿಯ ಕಲಾಕೃತಿಗಳು ಕಾಣಿಕೆ ರೂಪದಲ್ಲಿ ಭಕ್ತರು ದೇವರಿಗೆ ಅರ್ಪಿಸಿದ್ದಾರೆ. ಇಂದು ನಾಲ್ಕನೇ ಹಂತದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಇನ್ನು ಮುಂದಿನ ಎಣಿಕೆ ಕಾರ್ಯ ಬಾಕಿ ಇದೆ ಎಂದು ತಿಳಿದುಬಂದಿದೆ. 1840ರಲ್ಲಿ ನಿರ್ಮಾಣವಾದ ಚಿತ್ತೋರ್‌ಗಢ್-ಉದಯಪುರ್ ಹೆದ್ದಾರಿಯಲ್ಲಿರುವ ಸನ್ವಾಲಿಯಾ ಸೇಠ್ ದೇವಸ್ಥಾನ ವೈಷ್ಣವ ಭಕ್ತರಿಗೆ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.