ಕಣ್ಣೂರು: ಕೊಟ್ಟಿಯೂರು ಶಿವ ಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಕ್ತರಿಗೆ ದೇವರ ದರ್ಶನ ಮೇ 30ರಿಂದ ಶುರುವಾಗಲಿದೆ.

ಕರ್ನಾಟಕದಿಂದ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದವರು ದೇವರ ದರ್ಶನಕ್ಕೆ ಅವಕಾಶ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕೊಟ್ಟಿಯೂರು ವೈಶಾಖ ಮಹೋತ್ಸವದ ಹಿನ್ನೆಲೆಯಲ್ಲಿ ದೇವರ ದರ್ಶನ ಈ ವರ್ಷ ಮೇ 30ರ ಮಧ್ಯರಾತ್ರಿಯಿಂದ ಶುರುವಾಗುತ್ತದೆ. ಸ್ತ್ರೀಯರಿಗೆ ಜೂನ್‌ 20ರ ಮಧ್ಯಾಹ್ನದವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಜೂನ್‌ 24ರಂದು ಈ ವರ್ಷದ ಕೊನೆಯ ಪೂಜೆ ನಡೆಯಲಿದೆ ಎಂದು ಹೇಳಿದ್ದಾರೆ.

ಮೇ 30ರಿಂದ ಅಕ್ಕರೆ ಕೊಟ್ಟಿಯೂರು ದೇವಸ್ಥಾನದ ಪ್ರವೇಶಕ್ಕೆ ಅವಕಾಶವಿದ್ದು, ಪ್ರತಿದಿನ ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಟ್ಟೆ ಎಸೆಯಬೇಡಿ, ಸ್ವಚ್ಛತೆ ಕಾಪಾಡಿ: ಈ ಬಾರಿ ದರ್ಶನಕ್ಕೆ ಆಗಮಿಸುವ ಭಕ್ತರು ಬಟ್ಟೆ ಒಳ ಉಡುಪುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಬಾರಿ ವೈಶಾಖ ಮಹೋತ್ಸವದ ವೇಳೆ ಆಗಮಿಸಿದ್ದ ಭಕ್ತರು ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದು ದೇವಸ್ಥಾನ ಪರಿಸರವನ್ನು ಸ್ವಚ್ಛಗೊಳಿಸುವುದು ಹರಸಾಹಸವಾಗಿತ್ತು. ಹೀಗಾಗಿ ಈ ಮನವಿ ಮಾಡಿದ್ದಾರೆ.