ನವದೆಹಲಿ: 2023ರ ಸೆಪ್ಟೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಕಾದಾಟದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರಿಗೆ ಈ ಸ್ವಾತಂತ್ರ್ಯ ದಿನದಂದು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ಘೋಷಿಸಲಾಗಿದೆ. ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.
ಭಾರತೀಯ ಸೇನೆಯ 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಮತ್ತು ಸಿಪಾಯಿ ಪರ್ದೀಪ್ ಸಿಂಗ್ ಅವರು ಕೋಕರ್‌ನಾಗ್ ಪ್ರದೇಶದ ಗಡೋಲ್‌ನಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಪ್ರಾಣ ತ್ಯಾಗ ಮಾಡಿದರು. ಕಳೆದ ವರ್ಷ ಸೆಪ್ಟೆಂಬರ್ 13ರಂದು ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿತ್ತು.

