ಶ್ರೀನಗರ: ಗಡಿ ಭಾಗಗಳಲ್ಲಿ ಸೇನೆ ಕಾರ್ಯಚರಣೆ ಮುಂದುವರೆದಿದ್ದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಪಡೆಗಳು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಕೊಂದುಹಾಕಿದ್ದಾರೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.

ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ. ಹತ್ಯೆಗೀಡಾದ ಉಗ್ರರ ಗುರುತು ಕುರಿತು ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಕೇವಲ ಒಂದು ವಾರದ ನಂತರ ಈ ಕಾರ್ಯಾಚರಣೆಯು ನಡೆದಿದೆ. ಗುಂಡಿನ ಚಕಮಕಿಯಲ್ಲಿ ಸೇನೆಯು ತನ್ನ ಇಬ್ಬರು ಸೈನಿಕರನ್ನು ಕಳೆದುಕೊಂಡಿತ್ತು.