ಹೊಸದಿಲ್ಲಿ: ನಾಪತ್ತೆಯಾಗಿದ್ದ ಅಮೆರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ತಿಳಿಸಿದೆ.
ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಎಂದು ರಾಯಭಾರ ಕಚೇರಿಯು ತಿಳಿಸಿದೆ.
“ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ನೀಡಲು ಭಾರತೀಯ ರಾಯಭಾರಿ ಕಚೇರಿಯು ಸಿದ್ಧವಾಗಿದೆ. ಮೃತದೇಹವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ಹಿಂತಿರುಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದೆ.
ಸಾಕೇತ್ ಶ್ರೀನಿವಾಸಯ್ಯ ಕರ್ನಾಟಕ ಮೂಲದವರಾಗಿದ್ದಾರೆ. ಅವರ ಲಿಂಕ್ಡ್ ಇನ್ ಸ್ವವಿವರಗಳ ಪ್ರಕಾರ, 2025ರಲ್ಲಿ ಐಐಟಿ ಮದ್ರಾಸ್ ನಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.

