ಹೈದರಾಬಾದ್: ರೈತರ ಪ್ರತಿಭಟನೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಕಂಗನಾ ರನೌತ್‌ ಅವರು ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರನೌತ್‌ ಒಬ್ಬ ಮಹಿಳೆ. ನಾನು ಆಕೆಯನ್ನು ಗೌರವಿಸುತ್ತೇನೆ. ಆದರೆ, ಅವರು ಸಂಸತ್ತಿನಲ್ಲಿರಲು ಅರ್ಹಳಲ್ಲ ಎಂದು ನಾನು ಭಾವಿಸುತ್ತೇನೆ. ಅವಿದ್ಯಾವಂತೆಯಾಗಿರುವ ಆಕೆ ಜನರ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಆಕೆ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾಳೆ. ಸಾಧ್ಯವಾದರೆ ದೇಶದ ಮಹಿಳೆಯರು, ಮಹಿಳಾ ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ದೇಶದ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಈಚೆಗೆ ಹಿಂದಿ ದಿನಪತ್ರಿಕೆ ದೈನಿಕ್‌ ಭಾಸ್ಕರ್‌ಗೆ ತಾವು ನೀಡಿದ ಸಂದರ್ಶನದ ತುಣುಕೊಂದನ್ನು ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಕಂಗನಾ ಹಂಚಿಕೊಂಡಿದ್ದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಶವಗಳು ನೇತಾಡುತ್ತಿದ್ದವು, ಅತ್ಯಾಚಾರಗಳು ನಡೆಯುತ್ತಿದ್ದವು ಎಂದು ಕೂಡ ಕಂಗನಾ ಆರೋಪಿಸಿದ್ದರು. ಅಲ್ಲದೆ, ಪಿತೂರಿಯಲ್ಲಿ ಚೀನಾ ಮತ್ತು ಅಮೆರಿಕದ ಪಾತ್ರವೂ ಇತ್ತು ಎಂದು ಅವರು ಹೇಳಿದ್ದರು.