ನವದೆಹಲಿ: ಭಾರತ ಮತ್ತು ಪಾಕ್ ನಡುವಿನ ದೀರ್ಘಾವಧಿಯ ದ್ವೇಷಕ್ಕೆ ಅಂತ್ಯ ಹಾಡಿ, ಶಾಂತಿ ಮಾತುಕತೆಗಳನ್ನು ಪುನರಾರಂಭಿಸುವಂತೆ ಭಾರತ ಮತ್ತು ಪಾಕಿಸ್ತಾನದ 117 ಪ್ರಮುಖ ಗಣ್ಯರು ಜಂಟಿ ಮನವಿ ಸಲ್ಲಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿರುವ ಗಣ್ಯರು, ಉಭಯ ದೇಶಗಳ ನಡುವೆ ಶಾಂತಿ, ಮಾತುಕತೆ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ತಕ್ಷಣದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
‘ಸೆಂಟರ್ ಫಾರ್ ಪೀಸ್ ಅಂಡ್ ಪ್ರೋಗ್ರೆಸ್’ ಈ ಜಂಟಿ ಮನವಿಯನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಒಟ್ಟು 117 ಗಣ್ಯರು ಸಹಿ ಹಾಕಿದ್ದಾರೆ. ಇದರಲ್ಲಿ ಭಾರತದ 61 ಹಾಗೂ ಪಾಕಿಸ್ತಾನದ 56 ಪ್ರಮುಖ ರಾಜಕಾರಣಿಗಳು, ರಾಜತಾಂತ್ರಿಕರು ಮತ್ತು ಸಾರ್ವಜನಿಕ ರಂಗದ ಮುಖಂಡರು ಸೇರಿದ್ದಾರೆ.
ಪತ್ರದಲ್ಲಿರುವ ಪ್ರಮುಖ ಬೇಡಿಕೆಗಳು: ದೀರ್ಘಕಾಲದ ಹಗೆತನದಿಂದಾಗಿ ಕೋಟ್ಯಂತರ ಯುವಕರ ಭವಿಷ್ಯ, ಉದ್ಯೋಗಾವಕಾಶ ಮತ್ತು ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗಣ್ಯರು, ಈ ಕೆಳಗಿನ ಪ್ರಮುಖ ಕ್ರಮಗಳಿಗೆ ಆಗ್ರಹಿಸಿದ್ದಾರೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸುವುದು ಮತ್ತು ಹೈಕಮಿಷನರ್‌ಗಳನ್ನು ಮರುನೇಮಕ ಮಾಡುವುದು. ಸಾಮಾನ್ಯ ವೀಸಾ ಸೇವೆಗಳನ್ನು ಪುನರಾರಂಭಿಸುವುದು ಮತ್ತು ವಾಣಿಜ್ಯ ವಿಮಾನಗಳ ಸಂಚಾರಕ್ಕಾಗಿ ಎರಡೂ ದೇಶಗಳ ವಾಯುಪ್ರದೇಶವನ್ನು (Airspace) ಮುಕ್ತಗೊಳಿಸುವುದು.
ಅಟ್ಟಾರಿ-ವಾಘಾ ಭೂ ಗಡಿಯನ್ನು ಮತ್ತೆ ತೆರೆಯುವುದು, ಶ್ರೀನಗರ-ಮುಜಫರಾಬಾದ್ ಬಸ್ ಸೇವೆಯನ್ನು ಮತ್ತೆ ಆರಂಭಿಸುವುದು ಮತ್ತು ಇತರ ಗಡಿಯಾಚೆಗಿನ ಸಂಪರ್ಕ ಉಪಕ್ರಮಗಳನ್ನು ಮುಕ್ತಗೊಳಿಸಲು ಕೋರಿದ್ದಾರೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಪೂರ್ಣಪ್ರಮಾಣದಲ್ಲಿ ತೆರೆಯುವುದು, ಪಾಕಿಸ್ತಾನದ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠದ ದರ್ಶನಕ್ಕೆ ಅವಕಾಶ ನೀಡುವುದು ಮತ್ತು ಉಭಯ ದೇಶಗಳ ಧಾರ್ಮಿಕ ಸ್ಥಳಗಳ ಭೇಟಿಗೆ ಸುಲಭ ವೀಸಾ ನೀಡುವುದು.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಸಮಗ್ರ ದ್ವಿಪಕ್ಷೀಯ ಮಾತುಕತೆಯನ್ನು ಪುನರಾರಂಭಿಸುವುದು. ಸಶಸ್ತ್ರೀಕರಣ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಎರಡೂ ದೇಶಗಳ ಕಾನೂನುಬದ್ಧ ಭದ್ರತಾ ಕಾಳಜಿಗಳನ್ನು ಪರಿಹರಿಸುವುದು ಸೇರಿದಂತೆ ಹಲವು ಅಂಶಗಳನ್ನು ಮನವಿಯಲ್ಲಿ ನೀಡಲಾಗಿದೆ.
ಸಹಿ ಹಾಕಿದ ಭಾರತದ ಪ್ರಮುಖರು: ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಪ್ರತ್ಯೇಕತಾವಾದಿ ನಾಯಕ ಮಿರ್ವೈಜ್ ಉಮರ್ ಫಾರೂಕ್, ಆರ್‌ಜೆಡಿ ಸಂಸದ ಮನೋಜ್ ಝಾ, ಮತ್ತು ಮಾಜಿ ಟಿಎಂಸಿ ಸಚಿವ ಹಾಗೂ ಪ್ರಸ್ತುತ ಎಜೆಯುಪಿ ನಾಯಕ ಹುಮಾಯೂನ್ ಕಬೀರ್.
ಪಾಕಿಸ್ತಾನದ ಪ್ರಮುಖರು: ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ, ಮಾಜಿ ರಾಜತಾಂತ್ರಿಕ ಅಶ್ರಫ್ ಜಹಾಂಗೀರ್ ಖಾಜಿ, ನ್ಯಾಷನಲ್ ಅಸೆಂಬ್ಲಿ ಸದಸ್ಯ ಇಸ್ಫಾನ್ಯಾರ್ ಭಂಡಾರಾ ಮತ್ತು ಪ್ರಖ್ಯಾತ ಪರಮಾಣು ವಿಜ್ಞಾನಿ ಹಾಗೂ ಲೇಖಕ ಪರ್ವೇಜ್ ಹುದ್ಭೋಯ್.
ಒಂದೆಡೆ ಗಣ್ಯರು ಶಾಂತಿ ಮಾತುಕತೆಗೆ ಒತ್ತಾಯಿಸುತ್ತಿದ್ದರೂ, ಭಾರತ ಸರ್ಕಾರ ಮಾತ್ರ ತನ್ನ ಹಳೆಯ ನಿಲುವಿಗೆ ಬದ್ಧವಾಗಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ, ಹಾಗೆಯೇ ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಸಂಪೂರ್ಣವಾಗಿ ಬ್ರೇಕ್ ಹಾಕುವವರೆಗೆ ಯಾವುದೇ ದ್ವಿಪಕ್ಷೀಯ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬುದು ಭಾರತದ ನಿಲುವಾಗಿದೆ. ಅವಿಶ್ವಾಸ ಮತ್ತು ಸಂಘರ್ಷದ ಬದಲು ಶಾಂತಿ, ಅಭಿವೃದ್ಧಿ ಮತ್ತು ಸಹಕಾರದ ಭವಿಷ್ಯವನ್ನು ಯುವ ಪೀಳಿಗೆಗೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

