ಜಮ್ಮು-ಕಾಶ್ಮೀರ: ಬಹು ನಿರೀಕ್ಷಿತ ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಹರಿಯಾಣದಲ್ಲಿ 1031 ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಣಿವೆ ನಾಡಿನಲ್ಲಿ 873 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ಆಗಲಿದೆ.
ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ಬಯಲಾಗಿದೆ. ಹರಿಯಾಣದಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗುವ ಸುಳಿವು ಸಿಕ್ಕಿದೆ. ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ಗೆ ಬಹುಪರಾಕ್ ಎಂದಿವೆ.
ಹ್ಯಾಟ್ರಿಕ್ ಗೆಲುವು ಕಾಣೋ ಕನಸು ಕಂಡಿದ್ದ ಬಿಜೆಪಿ ಪಕ್ಷಕ್ಕೆ ನಿರಾಸೆ ಆಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ 45 ಸ್ಥಾನಗಳು.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ 10 ವರ್ಷದ ಬಳಿಕ ಚುನಾವಣೆ ನಡೆದಿದೆ. ತಮ್ಮ ನೆಚ್ಚಿನ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುವ ಜಮ್ಮು-ಕಾಶ್ಮೀರದ ಮತದಾರರು ಅತಂತ್ರ ಫಲಿತಾಂಶದ ಭವಿಷ್ಯ ನುಡಿದಿದ್ದಾರೆ ಎಂದು ಸಮೀಕ್ಷೆ ಹೇಳಿವೆ. ಅತಂತ್ರದಲ್ಲೂ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಪಡೆ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಜಮ್ಮು-ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ 45. ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಹಾಗೂ ಇತರರು ಕಿಂಗ್ ಮೇಕರ್ ಆಗಲಿದ್ದಾರೆ. ಈಗಾಗಲೇ ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿದ್ದು, ಅದು ನಿಜವಾಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

