ಅಯೋಧ್ಯಾ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ಜಗದೀಶ್ ಅಫ್ಲೆ ಅವರನ್ನು ನೇಮಕ ಮಾಡಿದೆ.
ಮಹಾರಾಷ್ಟ್ರದ ಪುಣೆ ಮೂಲದವರಾದ ಜಗದೀಶ್ ಅಫ್ಲೆ ಅವರು ಐಐಟಿ ಬಾಂಬೆಯಿಂದ ಬಿ.ಟೆಕ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು, ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಸ್ವಯಂಸೇವಕರಾಗಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದಂದಿನಿಂದ ಯಾವುದೇ ವೇತನ ಪಡೆಯದೆ ಯೋಜನಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅಫ್ಲೆ, ಪ್ರಸ್ತುತ ತಮ್ಮ ಪತ್ನಿಯೊಂದಿಗೆ ಅಯೋಧ್ಯೆಯ ತೀರ್ಥ ಕ್ಷೇತ್ರ ಭವನದಲ್ಲೇ ನೆಲೆಸಿದ್ದಾರೆ.
ಇತ್ತೀಚೆಗೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ ಕಾರಣ ಬ್ಯಾಂಕ್ ವ್ಯವಹಾರ ನಡೆಸಲು ಅಧಿಕೃತ ಸಹಿದಾರರಿಲ್ಲದೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರಿಂದ ಸುಮಾರು 1,000ಕ್ಕೂ ಹೆಚ್ಚು ಸಿಬ್ಬಂದಿಯ ವೇತನ ಹಾಗೂ ಇತರೆ ಪಾವತಿಗಳು ವಿಳಂಬವಾಗಿದ್ದವು.
ಈ ಸಮಸ್ಯೆಗೆ ತಕ್ಷಣದ ಪರಿಹಾರವಾಗಿ ಟ್ರಸ್ಟ್, ಮಧ್ಯಂತರ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್ ಹಾಗೂ ಜಗದೀಶ್ ಅಫ್ಲೆ ಅವರನ್ನು ಎಸ್‌ಬಿಐ ಬ್ಯಾಂಕ್ ಖಾತೆಗಳ ಅಧಿಕೃತ ಸಹಿದಾರರನ್ನಾಗಿ ನೇಮಿಸಿದೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಫ್ಲೆ ಅವರ ನೇಮಕಾತಿಗೆ ಅಧಿಕೃತ ಮುದ್ರೆ ಬೀಳಲಿದೆ.
ಮಂದಿರ ಉದ್ಘಾಟನೆಯ ನಂತರ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ವೃತ್ತಿಪರಗೊಳಿಸಲು ಸಿಇಒ ಹಾಗೂ ಅಧಿಕೃತ ವಕ್ತಾರರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಸಿಇಒ ಹುದ್ದೆಗೆ ಬಂದಿರುವ ಸುಮಾರು 5,200 ಅರ್ಜಿಗಳನ್ನು ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ ನೇತೃತ್ವದ ಸಮಿತಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆಯ್ಕೆ ನಡೆಯಲಿದೆ. ಜೊತೆಗೆ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ಯೂಆರ್ ಕೋಡ್, ಡಿಜಿಟಲ್ ಸ್ವೀಕೃತಿ ಹಾಗೂ ಸಿಸಿಟಿವಿ ಕಣ್ಗಾವಲನ್ನು ಹೆಚ್ಚಿಸಲು ನೂತನ ನಿರ್ವಹಣಾ ಮಂಡಳಿ ತೀರ್ಮಾನಿಸಿದೆ.

