ನವದೆಹಲಿ: ದೇಶದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
‘ವಂದೇ ಮಾತರಂ’ ಅನ್ನು ಇನ್ಮುಂದೆ ಅದರ ಮೂಲ 6 ಚರಣಗಳೊಂದಿಗೆ ಹಾಡಬೇಕು ಎಂದು ಗೃಹ ಸಚಿವಾಲಯವು ತಿಳಿಸಿದೆ. ಮಾರ್ಗಸೂಚಿಗಳ ಅನ್ವಯ “ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಹಾಡಬೇಕು ಅಥವಾ ನುಡಿಸಬೇಕು ಮತ್ತು ಆಗ ಎಲ್ಲರೂ ಎದ್ದು ನಿಲ್ಲಬೇಕು” ಎಂದು ಸ್ಪಷ್ಟಪಡಿಸಲಾಗಿದೆ. 1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನು ಒಳಗೊಂಡಂತೆ, ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದು ಅಥವಾ ನುಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರಿ ಸಮಾರಂಭಗಳಲ್ಲಿ 6 ಪ್ಯಾರಾಗಳನ್ನೊಳಗೊಂಡ ‘ವಂದೇ ಮಾತರಂ’ ಆವೃತ್ತಿಯನ್ನು ಹಾಡಲಾಗುತ್ತದೆ. ಇದರ ಒಟ್ಟು ಅವಧಿ 3 ನಿಮಿಷ 10 ಸೆಕೆಂಡುಗಳು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಜನ ಗಣ ಮನ ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂ ಎರಡನ್ನೂ ಪ್ರಸ್ತುತಪಡಿಸುವ ಸಂದರ್ಭದಲ್ಲಿ, ‘ವಂದೇ ಮಾತರಂ’ ಅನ್ನು ಮೊದಲು ಹಾಡಲಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೆ ಮಾತರಂ ಹಾಡುವಾಗ ಸಭಿಕರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಆದರೆ, ಈ ನಿಯಮವು ಸಿನಿಮಾ ಮಂದಿರಗಳಂತಹ ಸಾರ್ವಜನಿಕ ಸ್ಥಳಗಳಿಗೆ ಅನ್ವಯಿಸುವುದಿಲ್ಲ.
ಪದ್ಮ ಪ್ರಶಸ್ತಿ ಪ್ರದಾನದಂತಹ ನಾಗರಿಕ ಗೌರವ ಸಮಾರಂಭಗಳು ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಆರಂಭ ಹಾಗೂ ಮುಕ್ತಾಯದ ವೇಳೆ ವಂದೇ ಮಾತರಂ ಅನ್ನು ಕಡ್ಡಾಯವಾಗಿ ಪ್ರಸ್ತುತಪಡಿಸಲಾಗುತ್ತದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿಯಲ್ಲಿ, ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನು ವಂದೇ ಮಾತರಂ ಗೀತೆಗೂ ವಿಸ್ತರಿಸಲು ಯೋಜಿಸಿದೆ. ಕಾನೂನಿನ ಪ್ರಕಾರ ರಾಷ್ಟ್ರಗೀತೆಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ವ್ಯಕ್ತಿಗೆ, ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದೀಗ ಈ ಶಿಷ್ಟಾಚಾರಗಳು ವಂದೇ ಮಾತರಂ ಗೀತೆಗೂ ಅನ್ವಯವಾಗುತ್ತವೆ.
ಬಂಕಿಮಚಂದ್ರ ಚಟರ್ಜಿಯವರು 1875ರ ನವೆಂಬರ್ 7ರಂದು (ಅಕ್ಷಯ ನವಮಿ) ‘ವಂದೇ ಮಾತರಂ’ ಗೀತೆಯನ್ನು ರಚಿಸಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಈ ಗೀತೆಗೆ ಈಗ 150 ವರ್ಷಗಳು ತುಂಬಿವೆ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ವರ್ಷಪೂರ್ತಿ ನಡೆಯುವ ಆಚರಣೆಗೆ ಚಾಲನೆ ನೀಡಿದ್ದಾರೆ. ಈ ಸಂಭ್ರಮಾಚರಣೆಯು ನವೆಂಬರ್ 7, 2025 ರಿಂದ ನವೆಂಬರ್ 7, 2026 ರವರೆಗೆ ದೇಶಾದ್ಯಂತ ನಡೆಯಲಿದೆ.

