ನವದೆಹಲಿ: ಆಹಾರ ಸುರಕ್ಷತೆಯ ವಿಷಯದಲ್ಲಿ ಐತಿಹಾಸಿಕ ಕ್ರಮ ಕೈಗೊಂಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ), ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿರುವ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪೌಷ್ಠಿಕಾಂಶದ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮತ್ತು ದೊಡ್ಡ ಗಾತ್ರದಲ್ಲಿ ಪ್ಯಾಕೆಟ್​ನ ಮೇಲೆ ಮುದ್ರಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್​​ಡಬ್ಲ್ಯೂ) ತಿಳಿಸಿದೆ.

ಈ ಹೊಸ ನಿಯಮದಿಂದ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿನ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಪ್ಯಾಕೆಟ್​ನ ಮೇಲೆ ದಪ್ಪ ಅಕ್ಷರಗಳಲ್ಲಿ ಮತ್ತು ತುಲನಾತ್ಮಕವಾಗಿ ದೊಡ್ಡ ಫಾಂಟ್ ಗಾತ್ರದಲ್ಲಿ ಮುದ್ರಿಸುವುದು ಕಡ್ಡಾಯ.

“ಶಿಫಾರಸು ಮಾಡಲಾದ ಆಹಾರ ಸೇವನೆಗೆ ಅನುಗುಣವಾಗಿ (ಆರ್​ಡಿಎ) ಪ್ರತಿ ಸರ್ವ್​​ನಲ್ಲಿ ಒಟ್ಟು ಸಕ್ಕರೆ, ಒಟ್ಟು ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಅಂಶಗಳ ಶೇಕಡಾವಾರು ಪ್ರಮಾಣವನ್ನು ಪ್ಯಾಕೆಟ್​ನ ಮೇಲೆ ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗುವುದು” ಎಂದು ಸಚಿವಾಲಯ ಹೇಳಿದೆ.

ಹೊಸ ತಿದ್ದುಪಡಿಯು, ಗ್ರಾಹಕರು ತಾವು ಸೇವಿಸುವ ಆಹಾರದಲ್ಲಿನ ಪೌಷ್ಠಿಕಾಂಶದ ಮೌಲ್ಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಉದ್ದೇಶ ಹೊಂದಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.