ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕುರಿತು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ್ದ ಹೇಳಿಕೆಗಳು ಈಗ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿವೆ. ಕಂಗನಾ ಅವರ ಹೇಳಿಕೆಯನ್ನು ಟೀಕಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ ಸೌರವ್ ದಾಸ್ ಅವರಿಗೆ ಕಂಗನಾ ರಣಾವತ್ ಖಾರವಾಗಿ ತಿರುಗೇಟು ನೀಡಿದ್ದಾರೆ.

ಪ್ರತಿಭಟನಾಕಾರರ ಶೈಲಿ ಮತ್ತು ಭಾಷೆಯನ್ನು ಖಂಡಿಸಿದ್ದ ಕಂಗನಾ, ವಿದ್ಯಾರ್ಥಿಗಳ ನಡೆ ಅಸಹ್ಯಕರವಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಸೌರವ್ ದಾಸ್, “ಕಂಗನಾ ಅವರನ್ನು ಅವರ ಸ್ವಂತ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ.

ಇನ್ನು ಇಂದಿನ ಯುವಜನತೆ ಅಥವಾ ‘ಜೆನ್ ಜಿ’ ಅವರ ಮಾತುಗಳನ್ನು ಕೇಳುವ ಪ್ರಶ್ನೆಯೇ ಇಲ್ಲ. ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾಗ ಸಂಸದೆ ಕೆಲಸದಲ್ಲಿ ಇಷ್ಟೊಂದು ಶ್ರಮವಿರುತ್ತದೆ ಎಂದು ತಿಳಿದಿರಲಿಲ್ಲ ಎಂದಿದ್ದರು. ಇದು ಅವರ ಗಂಭೀರತೆಯನ್ನು ತೋರಿಸುತ್ತದೆ” ಎಂದು ಟೀಕಿಸಿದ್ದರು.

ಸೌರವ್ ದಾಸ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಉತ್ತರ ನೀಡಿರುವ ಕಂಗನಾ, ತಮ್ಮ ಸಾಧನೆಗಳನ್ನು ಸಾಲಾಗಿ ತೆರೆದಿಟ್ಟಿದ್ದಾರೆ. “ನನಗೆ 28 ವರ್ಷ ವಯಸ್ಸಿದ್ದಾಗಲೇ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ.

ನಾನು ಕೇವಲ ಎರಡು ವರ್ಷಗಳಿಂದಷ್ಟೇ ರಾಜಕೀಯದಲ್ಲಿದ್ದೇನೆ, ಆದರೆ ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಟಿಯಾಗಿ, ಚಿತ್ರ ನಿರ್ಮಾಪಕಿಯಾಗಿ, ಚಿತ್ರಕಥೆಗಾರ್ತಿಯಾಗಿ ಹಾಗೂ ಉದ್ಯಮಿಯಾಗಿ ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಸೌರವ್ ದಾಸ್ ಅವರಂತೆ ಸಂಪೂರ್ಣವಾಗಿ ಉದ್ಯೋಗವಿಲ್ಲದೆ ಸುಮ್ಮನೆ ಕುಳಿತಿರುವವರಿಗೆ ಸದಾ ಬೇಡಿಕೆಯಲ್ಲಿರುವುದು ಏನೆಂಬುದು ಅರ್ಥವಾಗುವುದಿಲ್ಲ” ಎಂದು ಹೇಳಿದ್ದಾರೆ.

ಮುಂದುವರಿದು ಸೌರವ್ ದಾಸ್‌ಗೆ ಸಲಹೆ ನೀಡಿರುವ ಸಂಸದೆ, “ನಿಮ್ಮ ಸಮಸ್ಯೆಗಳು ವೈಯಕ್ತಿಕವಾದವು. ನೀವು ವಿದ್ಯಾರ್ಥಿಯಲ್ಲ, ಉದ್ಯೋಗವಿಲ್ಲದೆ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಅದಕ್ಕಾಗಿಯೇ ಮೊದಲು ಯಾವುದಾದರೂ ಉಪಯುಕ್ತ ಕೌಶಲ್ಯವನ್ನು ಕಲಿಯಲು ಪ್ರಾರಂಭಿಸಿ. ಅದು ನಿಮಗೆ ಒಳ್ಳೆಯ ದಾರಿ ತೋರಿಸುತ್ತದೆ” ಎಂದು ಲೇವಡಿ ಮಾಡಿದ್ದಾರೆ.