ಹೈದರಾಬಾದ್‌: ಇಂದು ಗಣೇಶ ಚತುರ್ಥಿ ಹಬ್ಬದ ಸಡಗರ, ಸಂಭ್ರಮ. ಗೌರಿ, ಗಣಪತಿಯ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ಯಾವುದೇ ಅಡೆತಡೆ ಬಾರದಂತೆ ಸಮೃದ್ಧಿಯನ್ನು ದಯಪಾಲಿಸು ಎಂದು ವಿಘ್ನ ನಿವಾರಕನ ಬಳಿ ಭಕ್ತರು ಕೋರಿಕೊಳ್ಳುತ್ತಾರೆ. ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ದೇಶದ ಅತಿ ದೊಡ್ಡ ಗಣಪತಿ ಮೂರ್ತಿ ಎಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ ಎಂದರೆ ಅದು ತೆಲಂಗಾಣದ ಹೈದರಾಬಾದ್ ಎಂದು ಹೇಳಲಾಗುತ್ತಿದೆ.

ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳು ಗಣೇಶನ ಉತ್ಸವಕ್ಕೆ ಬಾರೀ ಹೆಸರು ಪಡೆದುಕೊಂಡಿವೆ. ಇವುಗಳ ಜೊತೆಗೆ ಹೈದರಾಬಾದ್​ನಲ್ಲೂ ಗಣೇಶ ಉತ್ಸವ ಜೋರಾಗಿ ನಡೆಯುತ್ತದೆ. ಆದರೆ ಹೈದರಾಬಾದ್​ನ ಖೈರತಾಬಾದ್​ನಲ್ಲಿ 70ನೇ ವರ್ಷದ ಗಣೇಶೋತ್ಸವವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. 70ನೇ ವರ್ಷದ ಹಿನ್ನೆಲೆಯಲ್ಲಿ 70 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇದು 50 ಟನ್​ಗೂ ಅಧಿಕ ತೂಕವಿದೆ ಎನ್ನಲಾಗಿದೆ. ಇದಕ್ಕಾಗಿ ಕೆಲ ತಿಂಗಳುಗಳ ಮೊದಲೇ ಖೈರತಾಬಾದ್​ನ ಗಣೇಶ ಉತ್ಸವ ಸಮಿತಿ ಯೋಜನೆ ರೂಪಿಸಿ ಅತಿ ದೊಡ್ಡ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿದೆ ಎಂದು ತಿಳಿದು ಬಂದಿದೆ.

ಈ 70 ಅಡಿ ಎತ್ತರದ ಗಣೇಶ ಪರಿಸರ ಸ್ನೇಹಿಯಾಗಿದ್ದಾನೆ. ಇದನ್ನು ಸಂಪೂರ್ಣವಾಗಿ ಮಣ್ಣಿನಿಂದಲೇ ತಯಾರು ಮಾಡಲಾಗಿದೆ. ಇದನ್ನು ನಿರ್ಮಾಣ ಮಾಡಲು ಸುಮಾರು 1 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಅಯೋಧ್ಯೆಯ ರಾಮಲಲ್ಲಾನನ ವಿಗ್ರದಂತೆ ಇರೋ ಮೂರ್ತಿಯನ್ನು ಈ ಗಣೇಶನ ಪಕ್ಕದಲ್ಲಿ ಇಡಲಾಗಿದೆ. ಈ ದೊಡ್ಡ ಗಣಪತಿಯ ವಿಗ್ರಹ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಕೆಲವರು ಡ್ರೋನ್ ಕ್ಯಾಮೆರಾ ಬಳಸಿ ಗಣೇಶನ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.