ನವದೆಹಲಿ: ದೇಶದ ಭವಿಷ್ಯ ನಿರ್ಧರಿಸುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣದ ದೇಶದಲ್ಲಿ ವರ್ಷ ವರ್ಷ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಸಾವಿನ ಪ್ರಮಾಣ ಜನಸಂಖ್ಯಾ ಬೆಳವಣಿಗೆ ದರ ಮತ್ತು ರೈತರ ಆತ್ಮಹತ್ಯೆ ಸಂಖ್ಯೆಯನ್ನೂ ಮೀರಿಸಿದೆ ಎಂದು ವರದಿಯೊಂದು ಕಳವಳ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ.
ಜಾಗತಿಕವಾಗಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ನೆರವು ನೀಡುವ ‘ಐಸಿ3’ ಎಂಬ ಸರ್ಕಾರೇತರ ಸಂಸ್ಥೆ 2021-2022ನೇ ಸಾಲಿನ ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿ ಆಧರಿಸಿ ಇಂಥದ್ದೊಂದು ವರದಿ ಮುಂದಿಟ್ಟಿದೆ.
ಇದಕ್ಕೆ ಕಾರಣ ನೋಡುವುದಾದರೇ, ಶೈಕ್ಷಣಿಕ ಒತ್ತಡ, ಉದ್ಯೋಗ ಆಯ್ಕೆಯ ಒತ್ತಡ, ಶೈಕ್ಷಣಿಕ ಸಂಸ್ಥೆಗಳಿಂದ ಯಾವುದೇ ನೆರವಿಲ್ಲದಿರುವುದು, ರ್‍ಯಾಗಿಂಗ್ ಮತ್ತು ಕಿರುಕುಳ, ತಾರತಮ್ಯ, ಹಣಕಾಸು ಬಿಕ್ಕಟ್ಟು, ಕೌಟುಂಬಿಕ ರಚನೆಯಲ್ಲಿ ಬದಲಾವಣೆ, ಭಾವನಾತ್ಮಕವಾಗಿ ನಿರ್ಲಕ್ಷ್ಯ, ಸಾಮಾಜಿಕವಾಗಿ ಕಡೆಗಣನೆ, ಮಾನಸಿಕ ಒತ್ತಡದ ಕಡೆಗಣನೆ ಎಂದು ವರದಿ ತಿಳಿಸಿದೆ.
ಇನ್ನು 2021ರಲ್ಲಿ ಮಹಾರಾಷ್ಟ್ರದಲ್ಲಿ 1834, ಮಧ್ಯಪ್ರದೇಶ 1308, ತಮಿಳುನಾಡು 1246, ಕರ್ನಾಟಕ 855, ಒಡಿಶಾ 834 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಒಟ್ಟು ವಿದ್ಯಾರ್ಥಿಗಳ ಸಾವಿನಲ್ಲಿ ಈ 5 ರಾಜ್ಯಗಳ ಪಾಲು ಶೇ.46ರಷ್ಟಿದೆ. ಜೊತೆಗೆ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು ಶೇ.29ರಷ್ಟಿದೆ ಎಂದು ವರದಿ ಹೇಳಿದೆ.

