ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ರೈಲ್ವೇ ನಿರ್ಮಿಸಿರುವ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜಮ್ಮು ಕಾಶ್ಮೀರದಲ್ಲಿ ಸಂಪರ್ಕವನ್ನು ಸುಧಾರಿಸಲು ಭಾರತೀಯ ರೈಲ್ವೇಯು ಚೆನಾಬ್ ಸೇತುವೆಯ ಮೇಲೆ ರೈಲು ಕಾರ್ಯಾಚರಣೆಯನ್ನು ಸ್ವಾತಂತ್ರ್ಯ ದಿನದಂದು ಪ್ರಾರಂಭಿಸಲಿದೆ.

ಪ್ರಾರಂಭದಲ್ಲಿ ರೈಲು ಸೇವೆಗಳು ಜಮ್ಮುವಿನ ರಿಯಾಸಿಯಿಂದ ಕಾಶ್ಮೀರದ ಸಂಗಲ್ದಾನ್‌ವರೆಗೆ ಸಂಚರಿಸಲಿದ್ದು, ಬಳಿಕ ಈ ಸೇವೆಗಳನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.

ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಉಧಂಪುರ್ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯನ್ನು ಸಂಪರ್ಕಿಸುವ ಉದ್ದೇಶದಿಂದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಯೋಜನೆಯ ಒಂದು ಭಾಗವಾಗಿದೆ. ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲದ ಒಟ್ಟು ಉದ್ದ 272 ಕಿ.ಮೀ.ಗಳಾಗಿದೆ.

ಹೊಸದಾಗಿ ನಿರ್ಮಿಸಲಾದ ಚೆನಾಬ್ ಸೇತುವೆಯ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕವಾಗಿ ರೈಲು ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಸೇತುವೆ ಮೇಲೆ ಆಗಸ್ಟ್ 15ರಿಂದ ರೈಲುಗಳ ಓಡಾಟ ನಡೆಸಲಿದ್ದು, ಪ್ರಯಾಣಿಕರು ಪ್ರಯಾಣ ನಡೆಸಬಹುದಾಗಿದೆ.

ಚೆನಾಬ್ ಸೇತುವೆಯ ಮೇಲೆ ರೈಲುಗಳ ಸಂಚಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದೇಶದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ.

https://x.com/VivekSi85847001/status/1807407886357737561?