ನವದೆಹಲಿ: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೊ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಒಪ್ಪಿಗೆಯಿಲ್ಲದೆ ವಾಂಗ್ಚೂಕ್ ಅವರಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡಬಾರದು’ ಎಂದು ಹೇಳಿದ್ದಾರೆ.
‘ವಾಂಗ್ಚೂಕ್ ಅವರು ನಿನ್ನೆ (ಶುಕ್ರವಾರ) ಚೆನ್ನಾಗಿಯೇ ಇದ್ದರು. ಅವರನ್ನು ಆಸ್ಪತ್ರೆಗೆ ಕರೆತರುವ ಅಗತ್ಯವಿರಲಿಲ್ಲ. ಕಳೆದ 20 ದಿನಗಳಿಂದ ವಾಂಗ್ಚೂಕ್ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರು, ಕುಟುಂಬ ಮತ್ತು ನನ್ನಿಂದ ಒಪ್ಪಿಗೆ ಪಡೆಯದೆ ಅವರಿಗೆ ಯಾವುದೇ ಔಷಧಿಯನ್ನು ನೀಡಬಾರದು’ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನದ 32ನೇ ವಿಧಿಯ ಅನ್ವಯ ಇದು ನನ್ನ ಹಕ್ಕಾಗಿದೆ. ಒಂದು ವೇಳೆ ವಾಂಗ್ಚೂಕ್ ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಆಂಗ್ಮೋ ಎಚ್ಚರಿಕೆ ನೀಡಿದ್ದಾರೆ.
ವಾಂಗ್ಚೂಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ 21ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮುಂಜಾನೆ ಪೊಲೀಸರು ವಾಂಗ್ಚೂಕ್ ಅವರನ್ನು ಜಂತರ್ ಮಂತರ್‌ನಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ದೆಹಲಿ ಹೈಕೋರ್ಟ್ ಆದೇಶದ ಅನುಸಾರ ವಾಂಗ್ಚೂಕ್ ಅವರನ್ನು ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ವಾಂಗ್ಚೂಕ್, ನನ್ನ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ ಮುಷ್ಕರ ಮುಂದುವರಿಸಲು ನಿರ್ಧರಿಸಿರುವುದಾಗಿ ಹೇಳಿದ್ದರು.

