ಬಿಯೋರಾ: ಮಧ್ಯಪ್ರದೇಶದ ಒಂದು ಪುಟ್ಟ ಪಟ್ಟಣದ ನದಿ, ಕಸದ ರಾಶಿಯಿಂದ ತುಂಬಿ ನರಕವಾಗಿತ್ತು. ಯಂತ್ರಗಳಿಲ್ಲ, ಸರ್ಕಾರದ ನೆರವಿಲ್ಲ, ಈಜು ಕೂಡ ಬರಲ್ಲ. ಆದರೂ 21 ವರ್ಷದ ಒಬ್ಬ ವಿದ್ಯಾರ್ಥಿ ತನ್ನ ಎರಡು ಕೈಗಳಿಂದಲೇ ತಿಂಗಳುಗಟ್ಟಲೆ ನದಿಗಿಳಿದು ಟನ್‌ಗಟ್ಟಲೆ ಕಸವನ್ನು ಹೊರತೆಗೆದಿದ್ದಾನೆ. ಇವನೇ ಬಿಯೋರಾದ ಸುರೇಂದ್ರ ಸಿಂಗ್ ಚೌಧರಿ, ಎಲ್ಲರ ಬಾಯಲ್ಲಿ ಈಗ ‘ಬಿಟ್ಟು ತಬಾಹಿ’.
ಬಿಯೋರಾ ಪಟ್ಟಣದ ವಿಜ್ಞಾನ ಪದವಿ ವಿದ್ಯಾರ್ಥಿ ಸುರೇಂದ್ರ. ಜನವರಿ ತಿಂಗಳಲ್ಲಿ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಆರಂಭಿಸಿದ. ದೇವಸ್ಥಾನಕ್ಕೆ ಹೋಗುವಾಗ ಪ್ರತಿದಿನ ನದಿಯಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್, ಬಾಟಲಿ, ಪಾಚಿ, ಕಸವನ್ನು ನೋಡಿ ನೋಡಿ ಬೇಸತ್ತಿದ್ದ. “ಮೊದಲೆಲ್ಲ ದೇವಸ್ಥಾನಕ್ಕೆ ಹೋಗುವಾಗ ನದಿ ನೋಡಿ, ಇದನ್ನು ಸ್ವಚ್ಛ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದೆ” ಎಂದು ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾನೆ.
ಆರಂಭದಲ್ಲಿ ಗೆಳೆಯರ ಜೊತೆ ಆರಂಭಿಸಿದ ಕೆಲಸ, ನಂತರ ಎಲ್ಲರೂ ಬಿಟ್ಟು ಹೋದರು. ಆದರೆ ಸುರೇಂದ್ರ ಬಿಡಲಿಲ್ಲ. ಮನೆಯಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದೇನೆ, ಸ್ನೇಹಿತರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ನದಿಯ ಬಳಿ ಬರುತ್ತಿದ್ದೆ ಎಂದು ಎನ್‌ಡಿಟಿವಿಗೆ ಹೇಳಿಕೊಂಡಿದ್ದಾನೆ.
“ನದಿ ಸ್ವಚ್ಛ ಮಾಡಲು ಒಂದು ಯಂತ್ರ ಮಾಡಬೇಕು ಅಂತ ಆಸೆ ಇತ್ತು, ಆದರೆ ದುಡ್ಡಿರಲಿಲ್ಲ. ನಾನೊಬ್ಬ ವಿದ್ಯಾರ್ಥಿ. ಹಾಗಾಗಿ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ ಅಂತ ನಿರ್ಧರಿಸಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾನೆ.
ಈಜು ಬಾರದಿದ್ದರೂ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಬೇಸಿಗೆಯ ಸಂಜೆಯಲ್ಲೂ ನದಿಗಿಳಿದು ಕೆಲಸ ಮಾಡಿದ್ದಾನೆ. ಕಲುಷಿತ ನೀರಿನಿಂದಾಗಿ ಕೈ-ಕಾಲುಗಳ ಚರ್ಮ ಸುಲಿದು ಹೋಗಿ ಸೋಂಕು ತಗುಲಿದರೂ ಹಿಂಜರಿಯಲಿಲ್ಲ.
ಗೆಳೆಯರ ಜೊತೆ ಹಣ ಹೊಂದಿಸಿ ಸುಮಾರು 30,000 ರೂಪಾಯಿ ಖರ್ಚು ಮಾಡಿ ಉಪಕರಣಗಳನ್ನು ತಂದಿದ್ದಾನೆ. ನದಿಯ ಸುತ್ತಲೂ ಕಸದ ಬುಟ್ಟಿಗಳನ್ನೂ ಇಟ್ಟಿದ್ದಾನೆ. “ಯಾರಿಂದಲೂ ಒಂದು ರೂಪಾಯಿ ಫಂಡ್ ಪಡೆದಿಲ್ಲ” ಎಂದಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್, ದಿಗ್ಗಜರ ಮೆಚ್ಚುಗೆ ನದಿಯ ಹಿಂದಿನ ಮತ್ತು ಇಂದಿನ ಫೋಟೋಗಳು ವೈರಲ್ ಆದಂತೆ ಸುರೇಂದ್ರನ ಕೆಲಸಕ್ಕೆ ರಾಷ್ಟ್ರ-ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮಾರ್ಚ್‌ನಲ್ಲಿ ಈತನ ವಿಡಿಯೋವನ್ನು X ನಲ್ಲಿ ಹಂಚಿಕೊಂಡು “ಲೈಕ್‌ಗಳಿಗಾಗಿ ಮಾಡಿದರೂ ಅದು ಒಳ್ಳೆಯದಕ್ಕೆ ಪ್ರೇರಣೆಯಾದರೆ ನನಗೆ ಖುಷಿಯೇ” ಎಂದು “ಮಂಡೇ ಮೋಟಿವೇಷನ್” ಎಂದು ಕರೆದಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಸಹ ಈ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡು “ಹೀರೋಯಿಕ್! ಅಂತರಾಷ್ಟ್ರೀಯ ಮನ್ನಣೆಗೆ ಅರ್ಹ!” ಎಂದು ಬರೆದಿದ್ದಾರೆ.
ಸೋಶಿಯಲ್ ಮೀಡಿಯಾ ವ್ಯೂಸ್‌ಗಾಗಿ ಮಾಡುತ್ತಿದ್ದಾನೆ, AI ನಿಂದ ಫೋಟೋ ಎಡಿಟ್ ಮಾಡಿದ್ದಾನೆ ಎಂದವರಿಗೆ ವಿಡಿಯೋ ಮೂಲಕವೇ ಉತ್ತರ ಕೊಟ್ಟಿದ್ದಾನೆ. ಇದೀಗ ಬಿಯೋರಾ ಪುರಸಭೆ ಭಾರಿ ಯಂತ್ರೋಪಕರಣಗಳನ್ನು ನೀಡಿ ಕಸ ತೆಗೆಯಲು ನೆರವಾಗಿದೆ, ಸ್ಥಳೀಯರೂ ಕೈಜೋಡಿಸಿದ್ದಾರೆ.
ಕಸ ತೆಗೆಯುವುದು ಮಾತ್ರ ಪರಿಹಾರವಲ್ಲಆದರೆ ಸುರೇಂದ್ರನಿಗೆ ಗೊತ್ತಿದೆ, ಕಸ ತೆಗೆಯುವುದು ಮಾತ್ರ ಪರಿಹಾರವಲ್ಲ ಎಂದು. ಬಿಯೋರಾ ನದಿಗೆ 5 ದೊಡ್ಡ ಚರಂಡಿಗಳು ಕೊಳಚೆ ನೀರನ್ನು ಬಿಡುತ್ತಿವೆ. ಪುರಸಭೆ 14.77 ಕೋಟಿ ರೂಪಾಯಿ ವೆಚ್ಚದ ಸಂಸ್ಕರಣಾ ಘಟಕವನ್ನು ಪ್ರಸ್ತಾಪಿಸಿದೆ.
ಜೊತೆಗೆ ಜನರು ಪೂಜಾ ಹೂವು, ಸಾಮಗ್ರಿಗಳನ್ನು ನದಿಗೆ ಬಿಡುತ್ತಾರೆ. ಅವುಗಳನ್ನು ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಿದ್ದಾನೆ. “ಜನರು ಯಾಕೆ ನದಿಗೆ ಕಸ ಹಾಕುತ್ತಾರೋ ಗೊತ್ತಿಲ್ಲ. ಅವರನ್ನು ತಡೆಯಲು ಆಗಲ್ಲ” ಎಂದಿದ್ದಾನೆ. ಅವನ ಕೆಲಸ ನೋಡಿದ ದಿ ಓಷಿಯನ್ ಕ್ಲೀನ್‌ಅಪ್ ಸಂಸ್ಥಾಪಕ ಬೋಯನ್ ಸ್ಲಾಟ್ “ನಮ್ಮ ಜೊತೆ ಕೆಲಸಕ್ಕೆ ಬಾ” ಎಂದು X ನಲ್ಲಿ ಆಹ್ವಾನಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭೋಪಾಲ್‌ನಲ್ಲಿ ತಮ್ಮ ನಿವಾಸದಲ್ಲಿ ಸುರೇಂದ್ರನನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಒಂದು ಯಂತ್ರವಿಲ್ಲ, ಹಣವಿಲ್ಲ, ಬೆಂಬಲವಿಲ್ಲದಿದ್ದರೂ ಒಬ್ಬ ವ್ಯಕ್ತಿಯ ಇಚ್ಛಾಶಕ್ತಿ ಒಂದು ನದಿಯ ಹಣೆಬರಹವನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ಸುರೇಂದ್ರನೇ ಸಾಕ್ಷಿ.

