ನವದೆಹಲಿ : ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ 1967 ಅಡಿ, ಐಎಸ್​​​​​​​​​​​​​​ಐಎಸ್​​​​​​ ಪ್ರೇರಿತ ಹಿಜ್ಬ್-ಉತ್-ತಹ್ರಿರ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಇಂದು ಅಧಿಕೃತವಾಗಿ ಘೋಷಿಸಿದೆ.

ಹಿಜ್ಬ್-ಉತ್-ತಹ್ರೀರ್ ಮತ್ತು ಅದರ ಎಲ್ಲಾ ಅಂಗ ಸಂಘಟನೆಗಳನ್ನೂ UAPA ಅಡಿಯಲ್ಲಿ ಭಯೋತ್ಪಾದಕ ಸಂಘಟನೆಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಯುವಕರನ್ನು ಸೆಳೆದು, ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಸಂಘಟನೆಯು ತೊಡಗಿಸಿಕೊಂಡಿದೆ ಎಂದು ಸಚಿವಾಲಯ ಹೇಳಿದೆ.

ಇದು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮಕ್ಕೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂದು ಗೃಹ ಸಚಿವಾಲಯ ಅಭಿಪ್ರಾಯಪಟ್ಟಿದೆ. ಯುಎಪಿಎಯ ಮೊದಲ ವೇಳಾಪಟ್ಟಿಯಲ್ಲಿ ಸೇರ್ಪಡೆಗೊಂಡ ಹಿಜ್ಬ್-ಉತ್-ತಹ್ರೀರ್ 45ನೇ ಸಂಸ್ಥೆಯಾಗಿದೆ. ಗೃಹ ಸಚಿವಾಲಯದ ಪ್ರಕಾರ, ಹಿಜ್ಬ್-ಉತ್-ತಹ್ರೀರ್ ಎಂಬುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಜಿಹಾದ್ ಮತ್ತು ಭಯೋತ್ಪಾದಕ ಚಟುವಟಿಕೆಗಳ ಮೂಲಕ ಉರುಳಿಸುವ ಮೂಲಕ ಭಾರತ ಸೇರಿದಂತೆ ಜಾಗತಿಕವಾಗಿ ಇಸ್ಲಾಮಿಕ್ ರಾಜ್ಯ ಮತ್ತು ಕ್ಯಾಲಿಫೇಟ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ.

ಹಿಜ್ಬ್-ಉತ್-ತಹ್ರೀರ್ ವಿವಿಧ ಸೋಷಿಯಲ್​​​​​​ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಭಯೋತ್ಪಾದನೆಯನ್ನು ಉತ್ತೇಜಿಸಿದೆ. ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಉತ್ತೇಜಿಸುವ ಮೂಲಕ ಕಾನೂನು ಬಾಹಿರ ಸಭೆಗಳನ್ನೂ ನಡೆಸಿದೆ ಎಂದಿದೆ.