ಮುಂಬೈ: ಮುಂಬೈನಲ್ಲಿ ಮಳೆ ರೌದ್ರನರ್ತನ ತಾಳಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಭಾನುವಾರ ಒಂದೇ ದಿನ ವಿವಿಧೆಡೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮರ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ, ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸೋಮವಾರವಾದ ಇಂದು ಸಹ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ. ಇದರಿಂದ ಹಲವು ರೈಲು ಮಾರ್ಗಗಳ ಸಂಚಾರ ಸ್ಥಗಿತಗೊಂಡಿದೆ. ಕೆಲ ರೈಲುಗಳ ಮಾರ್ಗಗಳಲ್ಲಿ ಏಕಾಏಕಿ ಬದಲಾವಣೆ ಮಾಡಲಾಗಿದೆ. ಮುಂಬೈ – ಪುಣೆ ಎಕ್ಸ್ ಪ್ರೇಸ್ ವೇನಲ್ಲೂ ತೀವ್ರ ಹಾನಿಯಾಗಿರುವುದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಸದ್ಯಕ್ಕೆ ಮುಂಬೈ, ಪುಣೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

