ಮುಂಬೈ: ಕಳೆದ ಮೂರು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ, ರೈಲು ಸೇವೆ ಸ್ಥಗಿತಗೊಂಡಿದೆ.

ಕಳೆದ ಆರು ದಿನಗಳಲ್ಲಿ ಮುಂಬೈ ನಗರದಲ್ಲಿ ಮಳೆಯ ಅವಾಂತರಕ್ಕೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ಮಳೆಯ ಕಾರಣ ಹಲವೆಡೆ ಭೂಕುಸಿತ, ನೀರು ನಿಲ್ಲುವುದು ಮತ್ತು ಅಪಘಾತಗಳು ಹೆಚ್ಚಾಗಿವೆ.

ಮಳೆಯ ಹೊಡೆತಕ್ಕೆ ರೈಲು ಸಂಚಾರ ತೀವ್ರವಾಗಿ ಹದಗೆಟ್ಟಿದೆ. ಇಂದು ಕೂಡ ಸೆಂಟ್ರಲ್ ಮತ್ತು ವೆಸ್ಟರ್ನ್ ರೈಲ್ವೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೂಡ 43 ರೈಲುಗಳ ಸಂಚಾರವನ್ನ ರದ್ದುಗೊಳಿಸಲಾಗಿದೆ. ಇದರಲ್ಲಿ ಸೆಂಟ್ರಲ್ ರೈಲ್ವೆಯ 27 ಮತ್ತು ವೆಸ್ಟರ್ನ್ ರೈಲ್ವೆಯ 16 ರೈಲುಗಳು ಸೇರಿವೆ.

ಲೋನಾವಾಲಾ-ಕರ್ಜತ್ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿರುವುದರಿಂದ ರೈಲು ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ. ಪಾಲ್ಘರ್ ಜಿಲ್ಲೆಯಲ್ಲಿ 300 ಮಿಲಿ ಮೀಟರ್‌ಗೂ ಹೆಚ್ಚು ಮಳೆಯಾಗಿದ್ದು, ನಲಸೋಪಾರಾ ಭಾಗದಲ್ಲಿ ಭಾರಿ ಜಲಾವೃತ ಉಂಟಾಗಿದೆ. ಇದರ ಪರಿಣಾಮವಾಗಿ ವಸಾಯಿ ಮತ್ತು ವಿರಾರ್ ನಡುವಿನ ಉಪನಗರ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.