ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ನಗರದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸಗೊಂಡಿದೆ. ಭಾರೀ ಮಳೆಯ ಹಿನ್ನೆಲೆ ಇಂದು ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಳೆಗೆ ನಗರದ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ. ದೆಹಲಿಯಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯ ಪರಿಣಾಮ ಪಂಚಕುಯಿಯನ್ ಮಾರ್ಗ್, ಮಿಂಟೋ ರಸ್ತೆ, ಮಥುರಾ ರಸ್ತೆ ಹಾಗೂ ಭಾರತ್ ಮಂಟಪದ ಗೇಟ್ ಸಂಖ್ಯೆ 7 ಜಲಾವೃತಗೊಂಡಿದೆ.
ದೆಹಲಿ, ಎನ್‌ಸಿಆರ್‌ನ ಹೆಚ್ಚಿನ ಸ್ಥಳಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗೋಹಾನಾ, ಸೋನಿಪತ್, ರೋಹ್ಟಕ್, ಸೋಹಾನಾ, ಪಲ್ವಾಲ್, ನುಹ್, ಔರಂಗಾಬಾದ್ ಮತ್ತು ಇತರ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರೀ ಮಳೆಯಿಂದಾಗಿ ಪ್ರತಿಕೂಲ ಹವಾಮಾನ ಉಂಟಾಗಿದ್ದು, ದೆಹಲಿಯಲ್ಲಿ ನೂರಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ.

