ನವದೆಹಲಿ: ಮಾಜಿ ಸಿಎಂ, ಮಂಡ್ಯ ಸಂಸದ ಹೆಚ್‌ಡಿ ಕುಮಾರಸ್ವಾಮಿ ಅವರು ಇಂದು ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ  ಕ್ಷೇತ್ರದ ಬಿಜೆಪಿ ಸಂಸದ ಡಾ.ಮಂಜುನಾಥ್‌  ಸುಳಿವು ನೀಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಮಾರಸ್ವಾಮಿಯವರು ಸಚಿವರಾಗುತ್ತಿರುವುದು ಖುಷಿ ತಂದಿದೆ. ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮೋದಿ ಪ್ರಮಾಣ ಬೆನ್ನಲ್ಲೇ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ.

ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಮಹತ್ವದ ಖಾತೆಗಳನ್ನು ಬಿಜೆಪಿ ಇಟ್ಟುಕೊಳ್ಳಲಿದ್ದು ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಮುಂತಾದ ಖಾತೆಗಳು ಮಿತ್ರ ಪಕ್ಷಗಳಿಗೆ ಸಿಗುವ ಸಾಧ್ಯತೆಯಿದೆ.

ಇಂದು ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ  ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಶಕೆ ಮತ್ತೆ ದೇಶದಲ್ಲಿ ಆರಂಭವಾಗಿದೆ.